ಬೆಂಗಳೂರು : ಮೂರು ವರ್ಷದ ಹಿಂದೆ ನಡೆದಿದ್ದ ಎಟಿಎಂ ದರೋಡೆ ಹಾಗೂ ಕೊಲೆ ಪ್ರಕರಣ ಬೇಧಿಸಿದ್ದ ಗೋವಿಂದಪುರ ಠಾಣೆ ಪೊಲೀಸರಿಗೆ ಇದೇ ಕೇಸ್ನಲ್ಲಿ ಕೃತ್ಯಕ್ಕೆ ಬಳಸಿದ್ದ ವಾಹನ ಜಪ್ತಿ ಮಾಡಲು ಮುಂದಾಗಿದ್ದಾಗ ಮತ್ತೊಂದು ಕಾರು ಕಳ್ಳತನ ಮಾರಾಟ ಜಾಲ ಬಯಲಿಗೆ ಬಂದಿದೆ.
ದುಬಾರಿ ಬೆಲೆಯ ಕಾರುಗಳನ್ನು ಕದ್ದು ನೋಂದಣಿ ಸಂಖ್ಯೆ ಬದಲಿಸಿ ಟ್ಯಾಂಪರಿಂಗ್ ಮಾಡಿ ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 1.80 ಕೋಟಿ ಮೌಲ್ಯದ ಎರಡು ಟೆಂಪೋ ಟ್ರಾವೆಲರ್, ಮಹಿಂದ್ರಾ ಹಾಗೂ ಹೊಂಡಾ ಸೇರಿದಂತೆ ವಿವಿಧ ಕಂಪನಿಗಳ 20 ಕಾರುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ :2018ರಲ್ಲಿ ಎಕ್ಸಿಸ್ ಬ್ಯಾಂಕ್ ಎಟಿಎಂ ಹಣ ದರೋಡೆ ಮಾಡಲಾಗಿತ್ತು. ಹಣ ತುಂಬಲು ಗನ್ ಮ್ಯಾನ್ ಹಾಗೂ ಕಸ್ಟೋಡಿಯನ್ ಎಟಿಎಂ ಒಳಗೆ ಹೋಗಿದ್ದರು. ಈ ವೇಳೆ ಡ್ರೈವರ್ ಅಬ್ದುಲ್ ಶಾಹಿದ್‌ನನ್ನು ಪುಸಲಾಯಿಸಿ ತಮ್ಮ ಕಾರಿನೊಳಗೆ ಕೂರಿಸಿಕೊಂಡಿದ್ದ ಬಂಧಿತ ಆರೋಪಿಗಳಾದ ಮಂಡ್ಯ ಮೂಲದ ಪ್ರಸನ್ನ, ಕುಮಾರ್, ಮಧು ಹಾಗೂ ಮಹೇಶ್ ಎಂಬುವರು ಹಣ ದೋಚಿ ಎಸ್ಕೇಪ್ ಆಗಿದ್ದರು.
ಚಾಲಕ ಅಬ್ದುಲ್ಗೂ ಕದ್ದ ಹಣದಲ್ಲಿ ಷೇರು ಕೊಡುವುದಾಗಿ ನಂಬಿಸಿ ₹75 ಲಕ್ಷ ಹಣ ದೋಚಿದ್ದರು. ದರೋಡೆ ಬಳಿಕ ಕುಣಿಗಲ್ ಬಳಿ ಐವರು ಸೇರಿ ಹಣವಿರುವ ಬಾಕ್ಸ್ ಒಡೆದು ತೆಗೆದುಕೊಂಡಿದ್ದರು. ದಾರಿ ಮಧ್ಯೆ ಅಬ್ದುಲ್ ತಾನು ವಾಪಸ್ ಹೋಗುತ್ತೇನೆ ಹಣ ಬೇಡ ಎಂದಿದ್ದ. ಇದರಿಂದ ರೊಚ್ಚಿಗೆದ್ದ ಆರೋಪಿಗಳು ಪ್ಲ್ಯಾನ್ ಮಾಡಿ ಆತನನ್ನು ಕಾರಿನಲ್ಲೇ ಕೊಲೆ ಮಾಡಿದ್ದರು. ಕೊಲೆ ಮಾಡಿದ ಬಳಿಕ ಸಕಲೇಶಪುರ ಬಳಿಯ ಫಾರೆಸ್ಟ್ ಏರಿಯಾದಲ್ಲಿ ಬಿಸಾಕಿ ಹೋಗಿದ್ದರು.
ಈ ಸಂಬಂಧ ಗೋವಿಂದಪುರ ಪೊಲೀಸರಿಗೆ ಮೂರು ವರ್ಷದ ಹಿಂದೆ ಪ್ರಕರಣ ಹಸ್ತಾಂತರವಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡ ಇನ್ಸ್‌ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ, ಆರೋಪಿಗಳನ್ನು ಬಂಧಿಸಿತ್ತು. ಇದೀಗ ಕೃತ್ಯಕ್ಕೆ ಬಳಸಿದ್ದ ಕಾರು ಪತ್ತೆ ಹಚ್ಚಲು ಮುಂದಾದ ಪೊಲೀಸರಿಗೆ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.