ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್ ಬೆಂಗಳೂರು: ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಮೃತದೇಹವನ್ನು ಮಣ್ಣಿನಲ್ಲಿ ಹೂತು ಹಾಕಿದ್ದ ಪ್ರಕರಣವನ್ನು ಕಾಡುಗೋಡಿ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 23 ದಿನಗಳ ಬಳಿಕ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ. ನಂತರ ಹೂತಿಟ್ಟಿದ್ದ ಶವವನ್ನು ಹೊರತೆಗೆದಿದ್ದಾರೆ.
ಪಶ್ಚಿಮ ಬಂಗಾಳ ಮೂಲದ 27 ವರ್ಷದ ಎಂ.ಡಿ.ರಸೂಲ್ ಹೌಲಾದಾರ್ ಎಂಬಾತ ಕಳೆದ ತಿಂಗಳು 14 ರಂದು ಆತ್ಮಹತ್ಯೆ ಮಾಡಿಕೊಂಡಿದ್ದನು. ಬಂಧಿತ ಆರೋಪಿಗಳಾದ ಮೊಹಮ್ಮದ್ ರಂಜಾನ್ ಹಾಗೂ ರಸಲ್ ಎಂಬುವರು, ಅದು ಸಹಜ ಸಾವು ಎಂಬಂತೆ ಬಿಂಬಿಸಿ ಖಾಜಿಸೊನ್ನೇನಹಳ್ಳಿ ಬಳಿಯ ಜಾಮೀಯಾ ಮಸೀದಿ ಸಮೀಪದಲ್ಲಿ ಮಣ್ಣು ಮಾಡಿದ್ದರು. ಕೆಲದಿನಗಳ ನಂತರ ಮೃತನ ತಂದೆಗೆ ಅನುಮಾನ ಬಂದಿದೆ. ತಮ್ಮ ಮಗನದ್ದು ಸಹಜ ಸಾವಲ್ಲ ಎಂದು ಆರೋಪಿಸಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಯಲಾಗಿದೆ.
ಸಂಬಳದ ವಿಚಾರಕ್ಕೆ ಗಲಾಟೆ:ಮೃತ ವ್ಯಕ್ತಿ ಹಾಗೂ ಆರೋಪಿಗಳೆಲ್ಲರೂ ಪಶ್ಚಿಮ ಬಂಗಾಳದ ಮೂಲದವರು. ಕಾಡುಗೋಡಿಯ ಬೀಸನಹಳ್ಳಿಯಲ್ಲಿ ವಾಸವಾಗಿದ್ದರು. ಜೀವನಕ್ಕಾಗಿ ಚಿಂದಿ ಆಯುವ ಕೆಲಸ ಮಾಡಿಕೊಂಡಿದ್ದ ಮೊಹಮ್ಮದ್ ರಂಜಾನ್ ಬಳಿ ಮೃತ ರಸೂಲ್ ಕೆಲಸಕ್ಕೆ ಸೇರಿಕೊಂಡಿದ್ದ. ಆದರೆ, ಸಂಬಳದ ವಿಚಾರಕ್ಕಾಗಿ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ಊರಿನಲ್ಲಿರುವ ಹೆಂಡ್ತಿಗೆ ಹಣ ಕಳುಹಿಸಲಿರಲಿಲ್ಲ ಎಂದು ರಸೂಲ್ ನೊಂದುಕೊಂಡಿದ್ದ. ಹೀಗಾಗಿ ವೇತನ ನೀಡುವಂತೆ ರಂಜಾನ್ಗೆ ಒತ್ತಾಯಿಸಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿತ್ತು.
ಸಂಬಳ ನೀಡದ ಕಾರಣಕ್ಕೆ ಬೇಸತ್ತಿದ್ದ ರಸೂಲ್ ಜ.14ರಂದು ಧರಿಸಿದ್ದ ಲುಂಗಿಯಿಂದಲೇ ನೇಣುಬಿಗಿದುಕೊಂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಷಯ ತಿಳಿದ ಆರೋಪಿಗಳು ಸಹಜ ಸಾವು ಎಂಬಂತೆ ಹೇಳಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ನ್ಯಾಯಾಲಯದ ಅನುಮತಿ ಪಡೆದು ಕೆ.ಆರ್.ಪುರಂ ತಹಶೀಲ್ದಾರ್ ನೇತೃತ್ವದಲ್ಲಿ ಅಂತ್ಯಕ್ರಿಯೆ ನಡೆಸಿದ್ದ ಜಾಗಕ್ಕೆ ತೆರಳಿ, ರಸೂಲ್ನ ಕಳೇಬರವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ 306 ಅನ್ವಯ ಕಿರುಕುಳ ತಾಳಲಾರದೇ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ: ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಮುಖಿ ದೇವಸ್ಥಾನ ರಸ್ತೆಯ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ದೊರೆತಿದೆ. ಹೆಂಡ್ತಿಯನ್ನು ಗಂಡನೇ ಕೊಲೆ ಮಾಡಿರುವ ಅನುಮಾನ ಗೋಚರಿಸಿದೆ. ಕೋಲ್ಕತಾ ಮೂಲದ ಮೊನಿಷ್ ಕತೂಮ್ ಸಾವನ್ನಪ್ಪಿದ್ದಾರೆ. ಪತಿ ಶೇಖ್ ಮಜಿದ್ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ದಂಪತಿ ವರ್ತೂರಿನಲ್ಲಿ ವಾಸವಾಗಿದ್ದರು. ಮಜೀದ್ ಟೈಲ್ಸ್ ಕೆಲಸ ಮಾಡುತ್ತಿದ್ದರೆ ಮೊನಿಷ್ ಗೃಹಿಣಿಯಾಗಿದ್ದರು. ಇಬ್ಬರು ಅನ್ಯೋನ್ಯವಾಗಿಯೇ ಇದ್ದರು. ಈ ಮಧ್ಯೆ ಅವರಿಬ್ಬರ ನಡುವೆ ಏನಾಯಿತೋ ಗೊತ್ತಿಲ್ಲ. ಇಂದು ಕೊಳೆತ ಸ್ಥಿತಿಯಲ್ಲಿ ಮೊನಿಷಾ ಶವವಾಗಿ ಕಂಡುಬಂದಿದ್ದಾರೆ. ಕಳೆದೆರಡು ದಿನಗಳಿಂದ ಲಾಕ್ ಆಗಿದ್ದ ಮನೆಯಿಂದ ದುರ್ವಾಸನೆ ಬಂದಿದ್ದು ನೆರೆಹೊರೆ ಮನೆಯವರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮನೆ ಕಿಟಕಿ ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಟ್ರಕ್ಗೆ ಗುದ್ದಿದ ಕಾರು: ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಸ್ಥಳದಲ್ಲೇ ಸಾವು