ಬೆಂಗಳೂರು: ಲಕ್ಷಾಂತರ ರೂ. ಬೆಲೆಯ ಎರಡು ಚಿನ್ನದ ಬಳೆಗಳನ್ನು ಆರ್ಡರ್ ಮಾಡಿ, ಮನೆಗೆ ಕೊಡಲು ಬಂದಿದ್ದ ವ್ಯಕ್ತಿಯಿಂದಲೇ ಬಳೆಗಳನ್ನು ದೋಚಿ ಕಳುಹಿಸಿದ್ದ ಶಾಕೀಜ್ ಅಹಮದ್ ಖಾನ್ ಎಂಬಾತನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. 10 ಲಕ್ಷ ರೂ. ಮೌಲ್ಯದ ಡೈಮಂಡ್ ಹರಳು, ಎರಡು ಚಿನ್ನದ ಬಳೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಜಯನಗರದ ನಿವಾಸಿ ಬಾಲಾಜಿ, ಹಯಗ್ರೀವ ಡೈಮಂಡ್ಸ್ ಹೆಸರಿನಲ್ಲಿ ಚಿನ್ನಾಭರಣ ಮಾರಾಟ ಹಾಗೂ ಅವುಗಳಿಗೆ ಹಾಲ್‌ಮಾರ್ಕ್ ಮಾಡಿಕೊಡುತ್ತಿದ್ದರು. ಇವರ ಬಳಿ ಎಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸತೀಶ್ ಎಂಬುವರು, ಆರ್ಡರ್ ಬಂದ ವಿಳಾಸಕ್ಕೆ ಚಿನ್ನಾಭರಣ ಕೊಟ್ಟು, ಹಣ ಪಡೆದುಕೊಂಡು ಬರುತ್ತಿದ್ದರು.
ನವೆಂಬರ್ 15 ರಂದು ಆಯಿಷಾ ಹೆಸರಿನಲ್ಲಿ ಆರೋಪಿಯು, ಸೆಂಥಿಲ್ ಎಂಬಾತನ ಮೂಲಕ ಫೋನ್ ಮಾಡಿಸಿ ಒಂದು ಜೊತೆ ಚಿನ್ನದ ಬಳೆ ಬೇಕು ಎಂದಿದ್ದಾನೆ. ಕೆಲಸಕ್ಕಿದ್ದ ಸತೀಶ್‌ಗೆ ಸೆಂಥಿಲ್ ಪರಿಚಯವಿದ್ದರಿಂದ ಆತನ ಜತೆ ವ್ಯವಹಾರಕ್ಕೆ ಒಪ್ಪಿದ್ದರು. ವಾಟ್ಸ್ಆ್ಯಪ್ ಮೂಲಕ ಚಿನ್ನದ ಬಳೆಗಳ ಫೋಟೊಗಳನ್ನು ಕಳುಹಿಸಿದ್ದರು. ಅದರಂತೆ 20 ಕ್ಯಾರೆಟ್ ಚಿನ್ನದ 61 ಗ್ರಾಂ ತೂಕದ ಬಳೆಗಳನ್ನು ಆರ್ಡರ್ ಮಾಡಿ, 10 ಲಕ್ಷ ರೂ.ನಿಗದಿ ಮಾಡಲಾಗಿತ್ತು.
ಬಳೆಗಳನ್ನು ಕಳುಹಿಸಿಕೊಡಿ, ಪರಿಶೀಲಿಸಿ ಹಣ ಕೊಟ್ಟು ಕಳುಹಿಸುವುದಾಗಿ ಮಹಿಳೆ ಮೂಲಕ ಆರೋಪಿ ಹೇಳಿಸಿದ್ದ. ಅದರಂತೆ ನ.19 ರಂದು ಸತೀಶ್ ಚಿನ್ನದ ಬಳೆಗಳನ್ನು ಕೊಡಲು, ರಾಚೇನಹಳ್ಳಿಯ ಮಾನ್ಯತಾ ಟೆಕ್‌ಪಾರ್ಕ್ ಬಳಿಯ ಏರಿಯಾದಲ್ಲಿದ್ದ ಆರೋಪಿಯ ಮನೆಗೆ ಹೋಗಿದ್ದ. ಬಳಿಕ ಹಾಲ್‌ಮಾರ್ಕ್ ಪರಿಶೀಲಿಸುವ ನೆಪದಲ್ಲಿ ಬಳೆಗಳನ್ನು ತೆಗೆದುಕೊಂಡು ಪರಾರಿಯಾಗಿದ್ದ.