ಬೆಂಗಳೂರು: ವೈವಾಹಿಕ ಸಂಸ್ಥೆಯಾದ ಮ್ಯಾಟ್ರಿಮೋನಿ ಜಾಲತಾಣದಲ್ಲಿ ಹೆಣ್ಣು ಬೇಕು ಎಂದು ಸ್ವವಿವರವುಳ್ಳ ಮಾಹಿತಿ ಹಾಕಿ ಯುವತಿಯರಿಗೆ ಮೋಸ ಮಾಡುತ್ತಿದ್ದ ವ್ಯಕ್ತಿಯನ್ನು ಯಲಹಂಕ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮ್ಯಾಟ್ರಿಮೋನಿಯಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ಯುವತಿಯರಿಗೆ ವಂಚಿಸುತ್ತಿದ್ದ ಖತರ್ನಾಕ್ ಬಂಧನ - ಮ್ಯಾಟ್ರಿಮೋನಿ ಜಾಲತಾಣ
ಮದುವೆಯಾಗಿ ಹೆಂಡತಿ ತೀರಿಕೊಂಡಿದ್ದಾಳೆ ಎಂದು ಸುಳ್ಳು ಹೇಳಿ ಎರಡನೇ ಮದುವೆಗೆ ಸಿದ್ದವಿರುವ ಯುವತಿಯರನ್ನು ವಂಚಿಸಿ, ಅವರಿಂದ ಹಣ ಪಡೆದು ವಂಚಿಸುತ್ತಿದ್ದ ಖತರ್ನಾಕ್ನೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಮಂಜುನಾಥ್ ಯಲಹಂಕ ಪೊಲೀಸರ ವಶದಲ್ಲಿರುವ ಆರೋಪಿ. ಈತ ವಿಜಯನಗರದ ನಿವಾಸಿಯಾಗಿದ್ದು, ಮದುವೆಯಾಗಿ ಹೆಂಡತಿ ತೀರಿಕೊಂಡಿದ್ದಾಳೆ ಎಂದು ಸುಳ್ಳು ಹೇಳಿದ್ದ. ನನಗೆ ಮದುವೆಯಾಗಲು ಹೆಣ್ಣಿನ ಹುಡುಕಾಟದಲ್ಲಿದ್ದೇನೆ. ವಿಚ್ಚೇದನವಾಗಿ ಪ್ರತ್ಯೇಕವಾಗಿರುವ ಆಸಕ್ತರು ಸಂಪರ್ಕಿಸಬಹುದು ಎಂದು ಮ್ಯಾಟ್ರಿಮೋನಿಯಲ್ಲಿ ಜಾಹೀರಾತು ಹಾಕಿದ್ದ. ಈತನ ಪೋಸ್ಟ್ ನೋಡಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯೆಯೋರ್ವರು ಸಂಪರ್ಕಿಸಿದ್ದರು.
ಇದೇ ಸಲುಗೆಯಲ್ಲಿ ಇಬ್ಬರು ಪರಿಚಯಿಸಿಕೊಂಡಿದ್ದಾರೆ. ನಿರುದ್ಯೋಗಿಯಾಗಿದ್ದರೂ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ವೈದ್ಯೆ ಬಳಿ ಮಂಜುನಾಥ್ ಸುಳ್ಳು ಹೇಳಿದ್ದ. ಇದನ್ನು ನಂಬಿ ಆರೋಪಿಗೆ ಐದು ಲಕ್ಷ ಹಣ ಹಾಗೂ ಮೊಬೈಲ್ ಕೊಡಿಸಿದ್ದರು. ಕಾಲಕ್ರಮೇಣ ವಂಚಕನ ಹೆಂಡತಿ ಬದುಕಿರುವುದು ತಿಳಿದುಕೊಂಡು ಕೂಡಲೇ ಪೊಲೀಸರಿಗೆ ವೈದ್ಯೆ ದೂರು ನೀಡಿದ್ದರು. ಈ ದೂರಿನನ್ವಯ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಹಲವು ಮಹಿಳೆಯರಿಗೆ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.