ಬೆಂಗಳೂರು:ಸಚಿವಜಮೀರ್ ಅಹಮದ್ ಖಾನ್ ಅವರು ಪೋಸ್ಟ್ ಮಾಡಿರುವ ವಿಮಾನ ಪ್ರಯಾಣದ ವಿಡಿಯೋ ವಿಚಾರವಾಗಿರಾಜ್ಯಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಹರಿಹಾಯ್ದಿದ್ದಾರೆ. ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಜಮೀರ್ ಅಹಮದ್ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯ ಬರಗಾಲದಿಂದ ಬೇಯುತ್ತಿದೆ. ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸಾಮಾನ್ಯರ ಬದುಕು ಅಸಹನೀಯ ಪರಿಸ್ಥಿತಿ ತಲುಪಿದೆ. ಇಂಥ ಗಂಭೀರ ಪರಿಸ್ಥಿತಿಯಲ್ಲೂ ಸಚಿವ ಜಮೀರ್ ಅಹಮದ್ ಅವರ ಜೊತೆ ಜನರ ತೆರಿಗೆ ಹಣ ವ್ಯಯಿಸಿ ಜೆಟ್ ವಿಮಾನದಲ್ಲಿ ಪ್ರಯಾಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ರಾಜ್ಯದ ದೌರ್ಭಾಗ್ಯವಲ್ಲದೇ ಮತ್ತಿನ್ನೇನೂ ಅಲ್ಲ ಎಂದು ವಿಜಯೇಂದ್ರ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಟೀಕಿಸಿದ್ದಾರೆ.
ಮುಖ್ಯಮಂತ್ರಿ ಮತ್ತವರ ಮಂತ್ರಿಮಂಡಲದ ಸದಸ್ಯರ ಆಡಂಬರ, ವೈಭವದ ಪ್ರದರ್ಶನಗಳನ್ನು ನೋಡಿದರೆ "ರೋಮ್ ದೊರೆ ನೀರೋ" ಉಲ್ಲೇಖಿಸುವ ಬದಲು “ರಾಜ್ಯ ಬರದಿಂದ ತತ್ತರಿಸುತ್ತಿದ್ದರೆ ದೊರೆ ಆಕಾಶದಲ್ಲಿ ಓಲಾಡುತ್ತ ತೇಲುತ್ತಿದ್ದಾರೆ…” ಎಂದು ವರ್ಣಿಸಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಐಷಾರಾಮಿ ಪ್ರಯಾಣ ಸರೀನಾ? - ಆರ್.ಅಶೋಕ್:ರಾಜ್ಯದಲ್ಲಿ ಬರದ ಛಾಯೆ ಇದ್ದರೂ ಜೆಟ್ ವಿಮಾನದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಐಷಾರಾಮಿ ಪ್ರಯಾಣ ಸರೀನಾ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ಧಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರದಿಂದಾಗಿ ರೈತರು ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ರಾಜ್ಯದಲ್ಲಿ ಲಕ್ಷಾಂತರ ರೈತರು ಬರದಿಂದ ತತ್ತರಿಸಿ ಹೋಗಿದ್ದಾರೆ. ಬೇರೆ ರಾಜ್ಯಗಳಿಗೆ ರೈತರು ಗುಳೆ ಹೋಗುವ ಪರಿಸ್ಥಿತಿ ಇದೆ. ಸಿಎಂ ಸಿದ್ದರಾಮಯ್ಯ ಅವರು ಸಮಾಜವಾದಿ ಅಂತ ಹೇಳುತ್ತಾರೆ. ಇದೇನಾ ಸಮಾಜವಾದ? ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಕಡೆ, ರೈತರು ಬೇರೆ ರಾಜ್ಯಗಳ ಕಡೆ ಮುಖಮಾಡಿದ್ದಾರೆ. ಇನ್ನೊಂದು ಕಡೆ ಮಕ್ಕಳು ಶಾಲೆಗೆ ಜೆಸಿಬಿಗಳಲ್ಲಿ ಹೋಗುತ್ತಿದ್ದಾರೆ ಎಂದು ಮಕ್ಕಳು ಜೆಸಿಬಿ ಹೋಗ್ತಾಯಿರುವ ಮತ್ತು ಜೆಟ್ನಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಕುಳಿತಿರುವ ಫೋಟೋ ತೋರಿಸಿ ಆರ್ ಅಶೋಕ್ ಕಿಡಿಕಾರಿದರು.
ಶಾಸಕ ಬಿ.ಆರ್.ಪಾಟೀಲ್ ಒಬ್ಬರು ಅಭಿವೃದ್ಧಿ ಬಗ್ಗೆ ಕಾಳಜಿ ಇರುವ ಶಾಸಕ. ಅಭಿವೃದ್ಧಿ ಕುಂಠಿತವಾಗಿದೆ ಎಂದು ಸಚಿವರ ಮುಂದೆಯೇ ಹೇಳಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಒಂದೇ ಒಂದು ಕಲ್ಲು ಹಾಕಿಲ್ಲ. ನಮ್ಮನ್ನು ಆಯ್ಕೆ ಮಾಡಿ ಕಳಿಸಿದ ಜನ ಛೀಮಾರಿ ಹಾಕ್ತಿದ್ದಾರೆ ಎಂದು ಬಿ.ಆರ್. ಪಾಟೀಲ್ ಹೇಳಿದ್ದಾರೆ. ಬಿ.ಆರ್.ಪಾಟೀಲ್ಗೆ ಗೊತ್ತಿಲ್ಲ, ಅದು ಕರುನಾಡ ಕೋಟಿ ಜನರ ಮೇಲೆ ಕಲ್ಲು ಹಾಕಿದ್ದಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಸಂಸತ್ನಲ್ಲಿ ಸಂಸದರ ಅಮಾನತು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದ ವಿಧಾನಸಭೆಯಲ್ಲಿ ಅನಾಮಧೇಯ ವ್ಯಕ್ತಿ ಸೂಟ್ ಕೇಸ್ ತಂದು ಕುಳಿತಿದ್ದರು. ಅದರಲ್ಲಿ ಬಾಂಬ್ ಇತ್ತೋ ಅಥವಾ ಏನು ಇತ್ತೋ ಗೊತ್ತಿಲ್ಲ. ಸಂಸದ ಪ್ರತಾಪ್ ಸಿಂಹ ಅವರ ರಾಜೀನಾಮೆ ಕೇಳುತ್ತಿದ್ದೀರಲ್ಲ, ಈಗ ಸಿದ್ದರಾಮಯ್ಯನವರೇ ಸಂಸತ್ ಪ್ರವೇಶ ಸಂಬಂಧ ಕೇಂದ್ರ ಸರ್ಕಾರ ಈಗಾಗಲೇ ಹಲವಾರು ತನಿಖೆ ಮಾಡುತ್ತಿದೆ. ಅಸೆಂಬ್ಲಿ ಪ್ರವೇಶ ಬಗ್ಗೆ ನೀವು ಏನು ಕ್ರಮ ಕೈಗೊಂಡಿದ್ದೀರಾ ಸಿದ್ದರಾಮಯ್ಯನವರೇ?. ಇದಕ್ಕೆ ಉತ್ತರಿಸಿ, ಹಾಗಾದರೆ ನೀವು ರಾಜೀನಾಮೆ ಕೊಡಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಅಶೋಕ್ ಹರಿಹಾಯ್ದರು.
ಜೆಡಿಎಸ್ ಮೈತ್ರಿ ಸಂಚಲನ ಸೃಷ್ಟಿಸಿದೆ:ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಿ ಮೋದಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ನಿನ್ನೆ ಕುಮಾರಸ್ವಾಮಿ ಅವರು ನನಗೆ ಫೋನ್ ಮಾಡಿದರು. ಪ್ರಧಾನಿಯವರ ಭೇಟಿ ಬಗ್ಗೆ ಹೇಳಿದರು. ಮೈತ್ರಿ ಪಾಸಿಟಿವ್ ಆಗುವ ಸಂಚಲನ ಮೂಡಿಸಿದೆ. ಈ ಭೇಟಿ ಸ್ಫೂರ್ತಿದಾಯಕ ಅಂತ ಕುಮಾರಸ್ವಾಮಿ ಹೇಳಿದರು. ದೇವೇಗೌಡರ ಜತೆಗೂ ಪ್ರಧಾನಿಯವರು ಆತ್ಮೀಯವಾಗಿ ಮಾತಾಡಿದ್ದಾರೆ ಎಂದು ಹೇಳಿದರು.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನಾವು ಎಲ್ಲ ಸ್ಥಾನಗಳನ್ನೂ ಗೆಲ್ಲುತ್ತೇವೆ. ಪ್ರಧಾನಿಯವರ ಜತೆ ಸೀಟ್ ಹಂಚಿಕೆ ಬಗ್ಗೆ ಏನೂ ಮಾತಾಡಿಲ್ಲ ಅಂತ ಹೆಚ್ಡಿಕೆ ಹೇಳಿದರು. ಅದರಲ್ಲಿ ಯಾವುದೇ ತಕರಾರು ಇಲ್ಲ. ಸೀಟು ಹಂಚಿಕೆಯಲ್ಲಿ ಒಂದು ಸೀಟ್ ಹೆಚ್ಚು ಕಡಿಮೆ ಆದರೂ ನಡೆಯುತ್ತೆ ಅಂದಿದ್ದಾರೆ. ಸೀಟು ಹಂಚಿಕೆಯಲ್ಲಿ ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ವಿಜಯೇಂದ್ರ:ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2, ಜಾಗತಿಕವಾಗಿ 'ವಿಶ್ವದ ಅತ್ಯಂತ ಸುಂದರವಾದ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ' ಎಂದು ಪ್ರಶಂಸಿಸಲ್ಪಟ್ಟಿದೆ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ ಮತ್ತು ಅದರ ತ್ವರಿತ ಅನುಷ್ಠಾನದ ಭವಿಷ್ಯದ ವಿಧಾನವನ್ನು ಇದು ಉದಾಹರಿಸುತ್ತದೆ ಎಂದು ವಿಜಯೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2023 ರ ಯುನೆಸ್ಕೋದ ಪ್ರಿಕ್ಸ್ ವರ್ಸೈಲ್ಸ್ನ್ನು ಗೆದ್ದ ಈ ವಾಸ್ತುಶಿಲ್ಪದ ಅದ್ಭುತವು ಸುಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ. ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುತ್ತದೆ ಮತ್ತು ಆಧುನಿಕ ಮೂಲಸೌಕರ್ಯವನ್ನು ಸಮೃದ್ಧ ಹಸಿರಿನೊಂದಿಗೆ ಸಾಮರಸ್ಯದಿಂದ ಸಂಯೋಜಿಸುತ್ತದೆ. ಇದು ಸೌಂದರ್ಯದ ಭವಿಷ್ಯವನ್ನು ಒತ್ತಿಹೇಳುತ್ತದೆ. ಟರ್ಮಿನಲ್ 2 ಕೇವಲ ವಿಮಾನ ನಿಲ್ದಾಣವಾಗಿ ಹೊರಹೊಮ್ಮದೆ ವಾಸ್ತುಶಿಲ್ಪದ ವೈಭವ ಮತ್ತು ಸಾಂಸ್ಕೃತಿಕ ವೈಭವದ ಜಾಗತಿಕ ಸಂಕೇತವಾಗಿ ಹೊರಹೊಮ್ಮುತ್ತದೆ. ಭಾರತವನ್ನು ನಿಜವಾಗಿಯೂ ವಿಶ್ವಗುರುವನ್ನಾಗಿ ಮಾಡಲು ಬಿಜೆಪಿಯ ಪರಿವರ್ತಕ ಆಡಳಿತವನ್ನು ಇದು ಎತ್ತಿ ತೋರಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಕ್ರಿಸ್ಮಸ್, ನ್ಯೂ ಇಯರ್ ಆಚರಣೆ ಹಿನ್ನೆಲೆ: ಮುಂಜಾಗ್ರತಾ ಕ್ರಮಕ್ಕೆ ಜಿ.ಪರಮೇಶ್ವರ್ ಸೂಚನೆ