ಬೆಂಗಳೂರು:ಇಂದಿನಿಂದ ಕೊರೊನಾವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ. ಆದರೆ ಸರ್ಕಾರದ ಈ ಕಠಿಣ ನಿಯಮಗಳಿಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಸಿನಿಮಾ ಮಂದಿರ, ಜಿಮ್ ಸೆಂಟರ್ ಸೇರಿದಂತೆ ಇತರೆ, ಜನ ಗುಂಪು ಸೇರುವುದನ್ನು ತಡೆಯಲು 50-50 ತಂತ್ರವನ್ನ ಹೆಣೆದಿದೆ.
ತಿಂಗಳ ಹಿಂದೆ ಕೇವಲ 400-500ರ ಗಡಿಯಲ್ಲಿದ್ದ ಸೋಂಕಿತರ ಸಂಖ್ಯೆ ಇದೀಗ 4500ಕ್ಕೆ ಏರಿಕೆ ಆಗಿದೆ. ಈ ಏರಿಕೆಯು ಇದು ಜನರನ್ನು ಮತ್ತೆ ಚಿಂತೆಗೀಡು ಮಾಡಿದೆ. ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಕೋವಿಡ್ ಕೇಸ್ ಇಳಿಕೆಗೆ ಸಹಾಯವಾಗುತ್ತಾ? ಇದರ ಅಗತ್ಯತೆ ಇತ್ತಾ? ಈ ಬಗ್ಗೆ ತಜ್ಞರು ವೈದ್ಯರು ಅಭಿಪ್ರಾಯಗಳನ್ನು 'ಈಟಿವಿ ಭಾರತ'ದೊಂದಿಗೆ ಹಂಚಿಕೊಂಡಿದ್ದಾರೆ.
ಕೋವಿಡ್ 2ನೇ ಅಲೆ ಕುರಿತು ಮಾತನಾಡಿದ ವೈದ್ಯರು ಎಸಿಇ ಸುಹಾಸ್ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ವೈದ್ಯರಾಗಿರುವ ಡಾ. ಜಗದೀಶ್ ಹಿರೇಮಠ್, ಈಟಿವಿ ಭಾರತ್ನೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದೇ ದಿನದಲ್ಲಿ 3 ಸಾವಿರಕ್ಕೆ ಏರಿಕೆ ಆಗಿದ್ದು, ಸಾವಿನ ಸಂಖ್ಯೆಯು ದ್ವಿಗುಣವಾಗುತ್ತಿದೆ. ಹೀಗಿರುವಾಗ ಜನರು ಗುಂಪು ಸೇರುವುದನ್ನ ತಡೆಗಟ್ಟಲೇಬೇಕು. ಮೊನ್ನೆ ಹೋಳಿ ಹಬ್ಬದ ಎಫೆಕ್ಟ್ ಮುಂದಿನ ಎರಡ್ಮೂರು ದಿನಗಳಲ್ಲಿ ತಿಳಿಯಲಿದೆ. ಇನ್ನಷ್ಟು ಪಾಸಿಟಿವ್ ರೇಟ್ ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸೋಂಕು ಹೆಚ್ಚಾಗುತ್ತಿದ್ದು, ಜನತಾ ಕರ್ಫ್ಯೂ ಜಾರಿ ಮಾಡಿದರೂ ಉತ್ತಮ. ಅತೀ ಹೆಚ್ಚು ಯುವಕರಲ್ಲೇ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಹಿರಿಯರು ವ್ಯಾಕ್ಸಿನೇಷನ್ ಮಾಡಿಸಿಕೊಂಡಿರುವ ಕಾರಣಕ್ಕೆ ಸುರಕ್ಷಿತವಾಗಿದ್ದಾರೆ. ಅತೀ ಶೀಘ್ರದಲ್ಲಿ ಎಲ್ಲರಿಗೂ ವ್ಯಾಕ್ಸಿನೇಷನ್ ನೀಡಬೇಕು. ಇದನ್ನು ಅಸ್ತ್ರವಾಗಿ ಬಳಸಿ ವೈರಸ್ ಮೆಟ್ಟಿ ನಿಲ್ಲಬೇಕು ಎಂದು ಸಲಹೆ ನೀಡಿದರು.
ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ. ಸಚಿನ್ ಮಾತನಾಡಿ, ಸರ್ಕಾರ ಜಾತ್ರೆ, ಸಾಮಾಜಿಕ ಸಮಾರಂಭವನ್ನ ನಿಷೇಧಿಸಿದ್ದು, ಸಿನಿಮಾ, ಜಿಮ್, ಸ್ವಿಮ್ಮಿಂಗ್ ಸ್ಥಳದಲ್ಲೂ ನಿಯಂತ್ರಣ ಹೇರಿದೆ. ಕೊರೊನಾ ಹರಡುವುದನ್ನ ತಡೆಯಲು ಸಾಮಾಜಿಕ ಅಂತರವನ್ನ ಕಾಯ್ದುಕೊಳ್ಳವುದು ಬಹು ಮುಖ್ಯ. ಕೊರೊನಾ ಬಹುಬೇಗ ಹರಡುವ ದೃಷ್ಟಿಯಿಂದ ಈ ಮಾರ್ಗಸೂಚಿಗಳು ಅತ್ಯಗತ್ಯ ಎಂದರು.
ಮಾಸ್ಕ್ ಧರಿಸುವಾಗ ಬಾಯಿ-ಮೂಗಅನ್ನು ಸರಿಯಾದ ರೀತಿಯಲ್ಲಿ ಮುಚ್ಚುವುದು, ಗುಂಪು ಇರುವ ಜಾಗ, ಬಸ್ ನಿಲ್ದಾಣ ಮೆಟ್ರೋ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಉತ್ತಮ. ಕೋವಿಡ್ ಲಸಿಕೆ ಪಡೆಯುವ ಮೂಲಕವೂ ಕೊರೊನಾ ನಿಯಂತ್ರಿಸಬಹುದು. ಹೀಗಾಗಿ ಎಲ್ಲರೂ ಈ ಅವಕಾಶ ಬಳಸಿಕೊಂಡು ಲಸಿಕೆ ಪಡೆಯುವಂತೆ ಮನವಿ ಮಾಡಿದರು.
ಇದನ್ನೂ ಓದಿ..ವಿಟಿಯು ಘಟಿಕೋತ್ಸವ: ಸಿವಿಲ್ ಇಂಜಿನಿಯರಿಂಗ್ನಲ್ಲಿ ಅಸ್ಮತ್ ಶರ್ಮಿನ್ಗೆ 13 ಚಿನ್ನದ ಪದಕ