ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಸುನಾಮಿ ಜೋರಾಗಿಯೇ ಇದೆ. ಇಂದು ಕೂಡ ಬರೋಬ್ಬರಿ 1,272 ಹೊಸ ಪಾಸಿಟಿವ್ ಕೇಸ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 16,514ಕ್ಕೆ ಏರಿಕೆ ಆಗಿದೆ.
ದಿನೇ ದಿನೆ ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಿದ್ದು, ಇಂದು 7 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ 253 ಮಂದಿ ಕೊರೊನಾಗೆ ಹಾಗೂ 4 ಅನ್ಯ ಕಾರಣಕ್ಕೆ ಸೇರಿ ಒಟ್ಟು 257ಕ್ಕೆ ಸಾವಿನ ಸಂಖ್ಯೆ ಏರಿಕೆ ಆಗಿದೆ. ಐಸಿಯುನಲ್ಲಿ ಬರೋಬ್ಬರಿ 292 ಜನರು ಚಿಕಿತ್ಸೆ ಪಡೆಯುತ್ತಿದ್ದು ಆತಂಕ ಹುಟ್ಟಿಸಿದೆ. ಈವರೆಗೆ 8,063 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇತ್ತ ಸಕ್ರಿಯ ಪ್ರಕರಣಗಳ ಸಂಖ್ಯೆ 8,194 ಇದೆ. ರಾಜ್ಯದಲ್ಲಿ ಬರೋಬ್ಬರಿ 6,37,417 ಮಂದಿ ಕೊರೊನಾ ಸೋಂಕು ತಪಾಸಣೆ ಮಾಡಿಸಿಕೊಂಡಿದ್ದು, ಅದರಲ್ಲಿ 6,04,822 ಮಂದಿಯ ವರದಿ ನೆಗೆಟಿವ್, 16,514 ಪಾಸಿಟಿವ್ ಬಂದಿದೆ. ಮತ್ತೊಂದು ಅಘಾತಕಾರಿ ವಿಷಯ ಅಂದರೆ ಇಂದು ಪತ್ತೆಯಾಗಿರುವ ಕೇಸ್ಗಳಲ್ಲಿ ಭಾಗಶಃ ಸಂಪರ್ಕವೇ ಸಿಕ್ಕಿಲ್ಲ. ಸೋಂಕು ಹೇಗೆ ತಗುಲಿದೆ? ಯಾರಿಂದ ಸೋಂಕು ಬಂದಿದೆ ಎನ್ನುವುದನ್ನು ಆರೋಗ್ಯ ಇಲಾಖೆ ಪತ್ತೆ ಮಾಡುತ್ತಿದೆ.
ಶೋಕಾಸ್ ನೋಟಿಸ್
18 ಆಸ್ಪತ್ರೆಗಳಿಗೆ ಅಲೆದಾಡಿ ಪ್ರಾಣ ಬಿಟ್ಟ ರೋಗಿಯ ಪರದಾಟ ಹಿನ್ನೆಲೆ ತಪ್ಪಿತಸ್ಥ ಆಸ್ಪತ್ರೆಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ರೋಗಿಗೆ ಐಎಲ್ಐ ರೀತಿಯ ರೋಗ ಲಕ್ಷಣ ಇದ್ದಾಗ್ಯೂ ಚಿಕಿತ್ಸೆ ನೀಡದ 9 ಆಸ್ಪತ್ರೆಗಳಿಗೆ 24 ಗಂಟೆಯೊಳಗೆ ಉತ್ತರಿಸುವಂತೆ ಶೋಕಾಸ್ ನೋಟಿಸ್ ನೀಡಲಾಗಿದೆ.