ಬೆಂಗಳೂರು: ಪೂರ್ವ ಅರಬ್ಬೀ ಸಮುದ್ರದ ಕರ್ನಾಟಕದ ಕರಾವಳಿಯಲ್ಲಿ ಕಡಿಮೆ ಒತ್ತಡವಿರುವ ವಿಸ್ತರಿಸಿದ ಪ್ರದೇಶವಿದೆ. ಈ ಪ್ರಭಾವದಿಂದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಸ್ಥಳಗಳಲ್ಲಿ ಜುಲೈ 23ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದರು.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಜುಲೈ 20ರಂದು ಯೆಲ್ಲೋ ಅಲರ್ಟ್, ಜುಲೈ 21, 22 ಹಾಗೂ 23 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಕೆಲವೆಡೆ ಗುಡುಗಿನಿಂದ ಕೂಡಿದ ಭಾರಿ ಹಾಗೂ ಅತಿ ಹೆಚ್ಚು ಮಳೆ ನಿರೀಕ್ಷಿಸಲಾಗಿದೆ. ಜುಲೈ 20, 21 ಹಾಗೂ 22ರಂದು ಯೆಲ್ಲೋ ಅಲರ್ಟ್, ಜುಲೈ 23ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಜುಲೈ 22 ಮತ್ತು 23ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ತಿಳಿಸಿದರು.