ಬೆಂಗಳೂರು:ನಾಲ್ಕು ಬಾರಿ ಶಾಸಕನಾಗಿ ಗೆದ್ದು ಬರುತ್ತಿರುವ ನನಗೆ ಹಿರಿತನ ನೋಡಿ ಮಂತ್ರಿ ಸ್ಥಾನ ನೀಡಬೇಕು ಎಂದು ಭದ್ರಾವತಿ ಕಾಂಗ್ರೆಸ್ ಶಾಸಕ ಬಿ. ಕೆ ಸಂಗಮೇಶ್ ಒತ್ತಾಯಿಸಿದರು. ಬೆಂಗಳೂರಿನ ತಮ್ಮ ಕಚೇರಿ ಬಳಿ ಮಾಧ್ಯಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ಕೊಡಬೇಕೆಂದು ನಾನು ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡುತ್ತೇನೆ ಎಂದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಾಲ್ಕನೇ ಬಾರಿ ಜಯಗಳಿಸಿದ್ದೇನೆ. ಕಾಗೋಡು ತಿಮ್ಮಪ್ಪ ನಂತರ ನಾನೇ ಜಯ ಗಳಿಸಿರೋದು. ಸ್ವಾತಂತ್ರ್ಯ ಬಂದಾಗಿನಿಂದ ಭದ್ರಾವತಿಯ ಯಾರಿಗೂ ಸಚಿವ ಸ್ಥಾನ ಸಿಗಲಿಲ್ಲ. ಬಿಜೆಪಿಯಿಂದ ಸಾಕಷ್ಟು ಆಫರ್ ಬಂದರು ಕೂಡ ನಾನು ಪಕ್ಷ ಬಿಟ್ಟು ಹೋಗಲಿಲ್ಲ ಎಂದು ತಿಳಿಸಿದರು. ಸಂಗಮೇಶ್ ಅವರನ್ನ ಗೆಲ್ಲಿಸಿ ಎಂದು ಮನವಿ ಮಾಡಿದ್ರು. ಜನ ಮತ ಹಾಕಿದ್ದಾರೆ. ಒಂದು ವೇಳೆ ಸಚಿವ ಸ್ಥಾನ ಕೊಟ್ಟಿಲ್ಲ ಅಂದರೆ ಏನು ಮಾಡೋದಕ್ಕೆ ಆಗೋದಿಲ್ಲ. ಆದರೆ ನಾನು ಬಿಜೆಪಿಯ ಭದ್ರಕೊಟೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಗೆದ್ದಿದ್ದೇನೆ ಎಂದು ಸಂಗಮೇಶ್ ತಿಳಿಸಿದರು.
ಶಿವಮೊಗ್ಗ ಜಿಲ್ಲಾವಾರು ವಿಷಯದಲ್ಲಿ ನಾನು ಹಿರಿಯನಿದ್ದೇನೆ. ಶಿವಮೊಗ್ಗದಲ್ಲಿ ಪ್ರಾಮಾಣಿಕವಾಗಿ ನಾಲ್ಕು ಬಾರಿ ಗೆದ್ದಿದ್ದೇನೆ. ಇದರಿಂದ ನನಗೆ ಸಚಿವ ಸ್ಥಾನದ ಜೊತೆ ಶಿವಮೊಗ್ಗ ಉಸ್ತುವಾರಿ ನೀಡಬೇಕು. ನನಗೆ ಸಚಿವ ಸ್ಥಾನ ಸಿಗದಿದ್ದರೂ ಪಕ್ಷದಲ್ಲೇ ಇರುತ್ತೇನೆ. ನನ್ನ ಹಿರಿತನ ಪರಿಗಣಿಸಿ ಮಂತ್ರಿ ಸ್ಥಾನ ಕೊಡುವ ವಿಶ್ವಾಸವಿದೆ. ನನಗೆ ಸಿದ್ದರಾಮಯ್ಯ, ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಸಚಿವ ಸ್ಥಾನ ಕೊಡುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಭದ್ರಾವತಿ ಶಾಸಕರು ಇದೇ ವೇಳೆ ಹೇಳಿದ್ರು.