ಕರ್ನಾಟಕ

karnataka

ETV Bharat / state

ಪ್ರತಿದಿನವೂ ಬಿಜೆಪಿ ಕಚೇರಿಯಲ್ಲಿ ಸಚಿವರು ಲಭ್ಯ: ಡಿಸಿಎಂ ಲಕ್ಷ್ಮಣ ಸವದಿ

ಪ್ರತಿ ದಿನ ಒಬ್ಬ ಸಚಿವರು ಬಿಜೆಪಿ ಪಕ್ಷದ ಕಚೇರಿಗೆ ಭೇಟಿ ನೀಡಬೇಕೆಂಬ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.

ಡಿಸಿಎಂ ಲಕ್ಷ್ಮಣ ಸವದಿ

By

Published : Nov 7, 2019, 11:17 PM IST

ಬೆಂಗಳೂರು: ಪ್ರತಿ ದಿನವೂ ಒಬ್ಬ ಸಚಿವರು ಬಿಜೆಪಿ ಪಕ್ಷದ ಕಚೇರಿಗೆ ಭೇಟಿ ನೀಡಬೇಕೆಂಬ ತೀರ್ಮಾನ ಕೈಗೊಳ್ಳಲಾಗಿದೆ. ಹಾಗಾಗಿ ಇನ್ಮುಂದೆ ಪ್ರತಿ ದಿನ ಒಬ್ಬ ಸಚಿವರು ಬಿಜೆಪಿ ಕಚೇರಿಯಲ್ಲಿ ಲಭ್ಯವಿರಲಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.

ಕಾರ್ಯಕರ್ತರ ಕುಂದು ಕೊರತೆಯನ್ನು ಸಚಿವರು ಆಲಿಸಲಿದ್ದು, ಸಚಿವರ ಮನೆ, ವಿಧಾನಸೌಧಕ್ಕೆ ಕಾರ್ಯಕರ್ತರ ಅಲೆದಾಟ ತಪ್ಪಿಸಲು ಪಕ್ಷ ಈ ಪ್ರಯತ್ನಕ್ಕೆ ಮುಂದಾಗಿದೆ. ಇನ್ಮುಂದೆ ಕಾರ್ಯಕರ್ತರು ಅಹವಾಲು ಹಿಡಿದು ಪಕ್ಷದ ಕಚೇರಿಗೆ ಬಂದು ಸಮಸ್ಯೆ ಹೇಳಿಕೊಳ್ಳುವ ಜೊತೆಗೆ ಸಲಹೆಯನ್ನೂ ನೀಡಬಹುದು ಎಂದು ತಿಳಿಸಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೂಚನೆ ಮೇರೆಗೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಪಕ್ಷದ ಇತರು ಮುಖಂಡರು ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದಾರೆ. ಸಚಿವರು ಕನಿಷ್ಟ 3ಗಂಟೆಗಳ ಕಾಲ ಪಕ್ಷದ ಕಚೇರಿಯಲ್ಲಿ ಕುಳಿತು ಕಾರ್ಯಕರ್ತರ ಅಹವಾಲು ಆಲಿಸಬೇಕು. ತಮ್ಮ ನಿತ್ಯದ ರಾಜಕೀಯ ಜಂಜಾಟದಲ್ಲಿ ಪಕ್ಷದ ಕಾರ್ಯಕರ್ತರ ನಿರ್ಲಕ್ಷ್ಯ ಆಗಬಾರದು ಎಂದರು.

ಡಿಸಿಎಂ ಲಕ್ಷ್ಮಣ ಸವದಿ

ನಮ್ಮ ಕಚೇರಿ ಹಾಗೂ ಮನೆಗೆ ಬಂದುಜನರು ಅಹವಾಲು ಕೊಡುತ್ತಾರೆ. ಈ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಿಷ್ಟಾವಂತ ಕಾರ್ಯಕರ್ತರು ಇದರಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಇನ್ಮುಂದೆ ಎರಡು ಮೂರು ಗಂಟೆ ಸಚಿವರು ಪಕ್ಷದ ಕಚೇರಿಯಲ್ಲಿಯೇ ಇರಲಿದ್ದಾರೆ ಎಂದು ತಿಳಿಸಿದರು.

ಇಲಾಖೆ ಕಾರ್ಯವ್ಯಾಪ್ತಿಯ ಬಗ್ಗೆ ಚರ್ಚೆ, ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲು ಸಲಹೆ, ಸ್ವಂತ ಕೆಲಸಗಳು, ಪಕ್ಷ ಸಂಘಟನೆ ಸೇರಿ ಎಲ್ಲವನ್ನು ಪಕ್ಷದ ಕಾರ್ಯಕರ್ತರು ಪಕ್ಷದ ಕಚೇರಿಗೆ ಬಂದು ಚರ್ಚಿಸಬಹುದು. ನಾವು ಕೂಡ ಸರ್ಕಾರದ ನಡೆ ಬಗ್ಗೆ ಸಲಹೆ ಮತ್ತು ಸೂಚನೆ ಪಡೆಯಲಿದ್ದೇವೆ. ಅವರ ಭಾವನೆಗಳನ್ನು ಹಂಚಿಕೊಳ್ಳಲಿದ್ದೇವೆ ಎಂದು ಸವದಿ ಹೇಳಿದ್ರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಪ್ರತಿ ದಿನ ಒಬ್ಬೊಬ್ಬ ಸಚಿವರು ಪಕ್ಷದ ಕಚೇರಿಗೆ ಭೇಟಿ ನೀಡಬೇಕು ಎಂಬ ನಿಯಮವಿತ್ತು. ಇದೀಗ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಕೂಡ ಈ ನಿಯಮ ಅಳವಡಿಸಿಕೊಳ್ಳಲಾಗಿದ್ದು, ಇಂದಿನಿಂದಲೇ ಈ ನಿಯಮವನ್ನು ಬಿಜೆಪಿ ಜಾರಿಗೆ ತಂದಿದೆ. ಮೊದಲಿಗರಾಗಿ ಡಿಸಿಎಂ ಲಕ್ಷ್ಮಣ ಸವದಿ ಪಕ್ಷದ ಕಚೇರಿಗೆ ಭೇಟಿ ನೀಡಿ, ಕಾರ್ಯಕರ್ತರ ಅಹವಾಲು ಸ್ವೀಕರಿಸಿದರು.

ABOUT THE AUTHOR

...view details