ಬೆಂಗಳೂರು :ಇಂದು ಮತ್ತು ನಾಳೆ ಎರಡು ದಿನ ಕೊಡಗು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ. ಸ್ಥಳೀಯ ಮಟ್ಟದಲ್ಲಿ ಮಾಹಿತಿ ಪಡೆಯುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ನೆರೆಪೀಡಿತ ಮೈಸೂರು ಹಾಗೂ ಕೊಡಗು ಜಿಲ್ಲೆಗೆ ಶನಿವಾರ ತೆರಳುವ ಮುನ್ನ ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಾವೇರಿ ಜಲ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಸರ್ಕಾರ ಈಗಾಗಲೇ ಪರಿಹಾರ ಘೋಷಣೆ ಮಾಡಿದೆ. ಮುಖ್ಯಮಂತ್ರಿಗಳು ಆಸ್ಪತ್ರೆಯಲಿದ್ದು, ಪರಿಹಾರ ಘೋಷಣೆ ಮಾಡಿದ್ದಾರೆ. ಸಚಿವರಿಗೂ ನೆರೆ ಪೀಡಿತ ಪ್ರದೇಶಗಳಿಗೆ ಹೋಗುವಂತೆ ಹೇಳಿದ್ದಾರೆ. ಆದರೆ, ಶಿವಮೊಗ್ಗದಲ್ಲಿ ನೆರೆ ಪ್ರದೇಶಗಳಿಗೆ ಭೇಟಿ ನೀಡುವ ಬದಲು, ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಸಚಿವ ಈಶ್ವರಪ್ಪನವರ ವಿರುದ್ಧ ಕಿಡಿಕಾರಿದರು.
ಡಿಸಿಎಂ ಅಶ್ವತ್ಥ್ ನಾರಾಯಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಮುಖ್ಯಮಂತ್ರಿಗಳನ್ನೇ ಡಿಗ್ರೇಡ್ ಮಾಡೋಕೆ ಡಿಸಿಎಂ ಹೊರಟಿದ್ದಾರೆ. ಅವರು ಏನು ಮಾತನಾಡಿದರು ಎಲ್ಲ ಮಾಹಿತಿ ನಮಗೆ ಸಿಗುತ್ತೆ. ನಾವ್ಯಾಕೆ ಅವರ ವಿರುದ್ಧ ಆರೋಪ ಮಾಡೋಣ. ನಮಗೆ ಯಾರು ಏನು ಮಾತನಾಡಿದರು ಎಂಬುದು ಎಲ್ಲಾ ಗೊತ್ತಾಗುತ್ತೆ. ಬಿಜೆಪಿಯವರು ಏನು ಮಾತನಾಡಿದರು, ನಮ್ಮವರು ಏನು ಮಾತನಾಡಿದರು, ಎಲ್ಲವು ಗೊತ್ತಾಗುತ್ತದೆ ಎಂದು ಟಾಂಗ್ ನೀಡಿದರು.