ಬೆಂಗಳೂರು: ರಾಜ್ಯದಲ್ಲಿ ಮತ್ತೆ ಸಚಿವ ಸಂಪುಟ ವಿಸ್ತರಣೆ ವಿಷಯದ ಚರ್ಚೆ ಮುನ್ನಲೆಗೆ ಬಂದಿದೆ. ನವದೆಹಲಿಗೆ ತೆರಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ಸುಕರಾಗಿರುವ ನಡುವೆ, ಆರು ತಿಂಗಳಿಗೆ ಸಚಿವರಾಗಲು ಆಕಾಂಕ್ಷಿಗಳು ನಿರುತ್ಸಾಹರಾಗಿದ್ದರೂ ಆಸೆಯನ್ನು ಮಾತ್ರ ಬಿಟ್ಟಿಲ್ಲ. ಹಾಗಾಗಿ ಸಚಿವ ಸ್ಥಾನಕ್ಕೆ ಪೈಪೋಟಿ ಮುಂದುವರೆದಿದೆ.
ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಆಗಲಿದೆ, ಸದ್ಯದಲ್ಲೇ ದೆಹಲಿಗೆ ತೆರಳಿ ವರಿಷ್ಠರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡುತ್ತಿದ್ದಂತೆ, ಸಚಿವ ಸ್ಥಾನದ ಆಕಾಂಕ್ಷಿಗಳು ಫುಲ್ ಆ್ಯಕ್ಟಿವ್ ಆಗಿದ್ದಾರೆ. ಸಂಪುಟ ಸೇರಲು ಕಾತರದಿಂದ ಅವಕಾಶ ಎದುರು ನೋಡುತ್ತಿದ್ದಾರೆ. ವಿವಿಧ ಕಾರಣದಿಂದ ಸಂಪುಟದಿಂದ ಹೊರಬಿದ್ದಿರುವ ಹಿರಿಯ ನಾಯಕರಾದ ಕೆ.ಎಸ್. ಈಶ್ವರಪ್ಪ, ಲಕ್ಷ್ಮಣ ಸವದಿ ಮತ್ತು ರಮೇಶ್ ಜಾರಕಿಹೊಳಿ ಕ್ಯಾಬಿನೆಟ್ ರೀ ಎಂಟ್ರಿಗೆ ಪ್ರಯತ್ನ ನಡೆಸುತ್ತಿದ್ದಾರೆ. ಇವರ ಜೊತೆಗೆ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ರೇಣುಕಾಚಾರ್ಯ ಸೇರಿದಂತೆ ಹಲವರು ಸಂಪುಟ ಸೇರುವ ಪ್ರಯತ್ನದಲ್ಲಿದ್ದಾರೆ.
ಸಂಘ ಪರಿವಾರದ ಮೂಲಕ ಈಶ್ವರಪ್ಪ ಪ್ರಯತ್ನ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಹೆಸರು ಕೇಳಿಬಂದ ಕಾರಣದಿಂದ ಸಚಿವ ಸ್ಥಾನ ಕಳೆದುಕೊಂಡಿದ್ದ ಈಶ್ವರಪ್ಪ ಇದೀಗ ಪ್ರಕರಣದಲ್ಲಿ ಕ್ಲೀನ್ ಚಿಟ್ ನೊಂದಿಗೆ ಸಂಪುಟಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಬಗ್ಗೆ ಬಹಿರಂಗವಾಗಿಯೇ ತಮ್ಮ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಆದರೆ ನೇರವಾಗಿ ಸಚಿವ ಸ್ಥಾನ ನೀಡುವಂತೆ ಕೇಳದೆ ಸಂಘ ಪರಿವಾರದ ಹಿರಿಯರ ಮೂಲಕ ಒತ್ತಡ ಹೇರಿಸುತ್ತಿದ್ದಾರೆ. ಮುಂದಿನ ಚುನಾವಣೆ ವೇಳೆ 75 ವರ್ಷ ಮಿತಿಯ ಅಲಿಖಿತ ನಿಯಮಕ್ಕೆ ಸಿಲುಕಲಿರುವ ಈಶ್ವರಪ್ಪ ಈ ಬಾರಿಯೇ ಸರ್ಕಾರದ ಉಳಿದ ಅವಧಿಯಲ್ಲಿ ಸಂಪುಟದಲ್ಲಿರಬೇಕು ಎನ್ನುವ ಚಿಂತನೆಯಲ್ಲಿದ್ದು, ಸಂಘ ಪರಿವಾರದ ಮೂಲಕ ಅಪೇಕ್ಷೆ ಈಡೇರಿಸಿಕೊಳ್ಳಲು ಮುಂದಾಗಿದ್ದಾರೆ.
ಜಾರಕಿಹೊಳಿ, ಸವದಿ ಸರ್ಕಸ್:ಸಿಡಿ ಕೇಸ್ ನಿಂದ ಅಧಿಕಾರ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಮತ್ತು ಯಡಿಯೂರಪ್ಪ ಸಂಪುಟದಲ್ಲಿ ಡಿಸಿಎಂ ಆಗಿದ್ದ ಲಕ್ಷ್ಮಣ ಸವದಿ ಮತ್ತೆ ಕ್ಯಾಬಿನೆಟ್ ಸೇರಲು ಪ್ರಯತ್ನಿಸುತ್ತಿದ್ದು, ಕೇವಲ ಸಂಪುಟಕ್ಕೆ ಸೇಮಿತವಾಗದೆ ಬೆಳಗಾವಿ ರಾಜಕಾರಣದ ಮೇಲೆ ಹಿಡಿತ ಸಾಧಿಸಲು ಪೈಪೋಟಿಗೆ ಬಿದ್ದಿದ್ದಾರೆ. ಉಭಯ ನಾಯಕರೂ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿ ಅವಕಾಶದ ಬೇಡಿಕೆ ಇರಿಸಿದ್ದಾರೆ. ಈ ಮೊದಲು ಸುರೇಶ್ ಅಂಗಡಿ ಜಿಲ್ಲೆಯಲ್ಲಿ ಹಿಡಿತ ಹೊಂದಿದ್ದು, ಉಮೇಶ್ ಕತ್ತಿ ಪ್ರಭಾವವೂ ಇತ್ತು. ಆದರೆ ಈಗ ಆ ಇಬ್ಬರು ನಾಯಕರೂ ನಿಧನರಾಗಿದ್ದಾರೆ. ಹಾಗಾಗಿ ಜಿಲ್ಲೆಯ ರಾಜಕಾರಣದ ಹಿಡಿತ ಸಾಧಿಸಲು ಪೈಪೋಟಿ ಶುರುವಾಗಿದೆ. ಬೆಂಗಳೂರು ನಗರದ ನಂತರ ಅತಿ ಹೆಚ್ಚು ಕ್ಷೇತ್ರ ಇರುವ ಬೆಳಗಾವಿಗೆ ನಾಲ್ಕು ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಈಗ ಶಶಿಕಲಾ ಜೊಲ್ಲೆ ಮಾತ್ರ ಸಚಿವರಾಗಿದ್ದಾರೆ. ಹಾಗಾಗಿ ಮತ್ತೆ ಸಂಪುಟ ಸೇರಿ ಜಿಲ್ಲೆಯಲ್ಲಿ ರಾಜಕೀಯ ಪ್ರಭಾವ ಹೆಚ್ಚಿಸಿಕೊಳ್ಳಲು ಸವದಿ, ಜಾರಕಿಹೊಳಿ ಪ್ರಯತ್ನ ನಡೆಸಿದ್ದಾರೆ. ಇಬ್ಬರ ಬಗ್ಗೆಯೂ ಅರುಣ್ ಸಿಂಗ್ ಸಕಾರಾತ್ಮಕ ನಿಲುವು ಹೊಂದಿದ್ದು, ಹೈಕಮಾಂಡ್ ಜೊತೆ ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ ಎನ್ನಲಾಗ್ತಿದೆ.