ಬೆಂಗಳೂರು:ತಮ್ಮ ಸ್ಥಾನ ಉಳಿಸಿಕೊಳ್ಳಲು ಸಿಎಂ ಹೆಚ್.ಡಿ. ಕುಮಾರಸ್ವಾಮಿ ನಡೆಸಿದ ಕಡೆಯ ಪ್ರಯತ್ನ ಫಲ ಕೊಟ್ಟಿಲ್ಲ ಎಂಬ ಮಾಹಿತಿ ಇದೆ. ಇಂದು ಬೆಳಗ್ಗೆ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಜು. 24ರವರೆಗೆ ವಿಶ್ವಾಸಮತ ಸಾಬೀತು ಪ್ರಕ್ರಿಯೆ ಮುಂದೂಡಿಸುವ ಯತ್ನ ಮಾಡಿದ್ದರು. ಆದರೆ, ಇದು ಫಲ ಕೊಡುವ ಸೂಚನೆ ಇಲ್ಲ ಎಂಬ ಮಾಹಿತಿ ಇದೆ.
ವಿಳಂಬ ಮಾಡಿದರೆ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಎನ್. ಮಹೇಶ್ ಪಕ್ಷಕ್ಕೆ ನೀಡಿದ ಬೆಂಬಲದ ಮಾದರಿಯಲ್ಲೇ ಇನ್ನಷ್ಟು ಶಾಸಕರು ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿ ಬಂದು ಬಿಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಸ್ಪೀಕರ್ ರಮೇಶ್ ಕುಮಾರ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇದಕ್ಕೆ ಸಮ್ಮತಿ ಸೂಚಿಸಿಲ್ಲ ಎಂಬ ಮಾಹಿತಿ ಇದೆ. ಅಲ್ಲದೆ ಇನ್ನಷ್ಟು ಮುಂದೂಡಿದರೆ ನಾನು ವಚನ ಭ್ರಷ್ಟ ಆಗುತ್ತೇನೆ ಎಂಬ ಮಾತನ್ನು ಸದನದಲ್ಲೇ ಹೇಳಿದ್ದು ಸ್ಪಷ್ಟವಾಗಿ ಇಂದು ಸಂಜೆ ವಿಶ್ವಾಸ ಮತಕ್ಕೆ ಹಾಕುವುದು ಖಚಿತ ಎನ್ನಲಾಗುತ್ತಿದೆ.
ಶಾಸಕರಿಗೆ ಬುಲಾವ್
ಈಗಾಗಲೇ ದೋಸ್ತಿ ಪಕ್ಷದ ನಾಯಕರು ಹಾಗೂ ಪ್ರತಿಪಕ್ಷ ಬಿಜೆಪಿ ನಾಯಕರು ಸಂಜೆ ವೇಳೆಗೆ ಅದರಲ್ಲೂ ಸಂಜೆ 5-6 ಗಂಟೆ ಒಳಗೆ ಎಲ್ಲರೂ ಸದನದಲ್ಲಿ ಹಾಜರಿರುವಂತೆ ಸೂಚಿಸಿದ್ದಾರೆ ಎಂಬ ಮಾಹಿತಿ ಇದೆ. ಮೂರೂ ಪಕ್ಷದವರು ಕೆಲ ಶಾಸಕರು ಸದನದಿಂದ ಹೊರಗಿದ್ದು, ಅವರೆಲ್ಲರೂ ಸಮಯ ಮಿತಿ ಒಳಗೆ ಆಗಮಿಸುವಂತೆ ಸೂಚಿಸಲಾಗಿದೆ. ಬಿಜೆಪಿ ಶಾಸಕರೊಬ್ಬರು ಅನಾರೋಗ್ಯ ಪೀಡಿತರಾಗಿದ್ದು ಅವರನ್ನೂ ಕರೆಸಲಾಗಿದೆ. ಅಲ್ಲದೆ ಮೂವರು ಶಾಸಕೀಯರು ಇನ್ನೂ ಆಗಮಿಸಿಲ್ಲ. ಇವರಿಗೂ ಬರಲು ತಿಳಿಸಲಾಗಿದೆ.