ಬೆಂಗಳೂರು :ನೀರಾವರಿ ಯೋಜನೆಗಳಿಗೆ ರೈತರಿಂದ ಭೂಸ್ವಾಧೀನ ಮಾಡಿಕೊಂಡ ಜಮೀನುಗಳಿಗೆ ಸರ್ಕಾರ ಪರಿಹಾರ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವ ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಿಧಾನಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು.
ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಶಾಸಕ ಆನಂದ್ ನ್ಯಾಮೇಗೌಡ ಅವರು ಮಾತನಾಡಿ, ಕೃಷ್ಣ ಮೇಲ್ದಂಡೆ ಯೋಜನೆಗೆ ರೈತರಿಂದ ಭೂ ಸ್ವಾಧೀನ ಮಾಡಿಕೊಂಡು ಅನೇಕ ವರ್ಷಗಳಾಗಿವೆ. ಆದರೆ, ಸರ್ಕಾರ ಈವರೆಗೂ ಅವರಿಗೆ ಯಾವುದೇ ರೀತಿಯ ಪರಿಹಾರ ನೀಡಲಿಲ್ಲ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್‌ನ ಸದಸ್ಯ ಶಿವಲಿಂಗೇಗೌಡ, ಸಿ ಎಸ್ ಪುಟ್ಟರಾಜು, ಹೆಚ್ ಕೆ ಕುಮಾರಸ್ವಾಮಿ ಸೇರಿ ಹಲವು ಸದಸ್ಯರು ಎತ್ತಿನಹೊಳೆ ವಿಚಾರ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಮುಗಿಬಿದ್ದರು. ಸರ್ಕಾರ ನೀರಾವರಿ ಯೋಜನೆ ಅನುಷ್ಠಾನ ಮಾಡಲು ಭೂಸ್ವಾಧೀನ ಮಾಡಿಕೊಳ್ಳುತ್ತದೆ.
ಜಮೀನು ಸೇರಿದಂತೆ ಎಲ್ಲವನ್ನು ಕಳೆದುಕೊಂಡಿರುವವರು ಪರಿಹಾರವೂ ಸಿಗದೆ ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ. ಹಣ ಕೊಡಿಸದಿದ್ದರೆ ನೇಣು ಹಾಕಿ ಎಂದು ಹೇಳಿದ್ದೇವೆ. ಈಗ ಜನ ನಮ್ಮನ್ನು ನೇಣು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಯಾಕೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಶಿವಲಿಂಗೇಗೌಡ ಪ್ರಶ್ನಿಸಿದರು.