ಬೆಂಗಳೂರು :ಆದಷ್ಟು ಬೇಗ ಕೆಪಿಸಿಸಿಗೆ ಅಧ್ಯಕ್ಷರನ್ನು ನೇಮಕ ಮಾಡಬೇಕು. ಇಲ್ಲದಿದ್ದರೆ ಪಕ್ಷ ಸೊರಗಿ ಹೋಗುತ್ತೆ ಎಂದು ಮಾಜಿ ಸ್ಪೀಕರ್ ಕೆ ಬಿ ಕೋಳಿವಾಡ ಆತಂಕ ವ್ಯಕ್ತಪಡಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮನ್ನು ಕೇಳಿದ್ರೆ ಆದಷ್ಟು ಬೇಗ ಮಾಡಿ ಎಂದು ನಾವು ಹೇಳುತ್ತೇವೆ. ತಡ ಮಾಡಿದಷ್ಟು ಅಪಾಯ ಖಂಡಿತ. ಇದನ್ನು ನಾನು ಹೈಕಮಾಂಡ್ ಗಮನಕ್ಕೂ ತರುವ ಪ್ರಯತ್ನ ಮಾಡುತ್ತೇನೆ. ಕೆಪಿಸಿಸಿ ಪದಾಧಿಕಾರಿಗಳ ನೇಮಕ ಕೂಡ ಆಗಬೇಕಿದೆ. ಹೈಕಮಾಂಡ್ ಬಳಿಯೂ ಸ್ವಲ್ಪ ಗೊಂದಲವಿದೆ. ಅಲ್ಲಿ ಎಐಸಿಸಿ ಅಧ್ಯಕ್ಷರು ಯಾರು ಆಗಬೇಕು ಎನ್ನುವ ಬಗ್ಗೆ ಸ್ವಲ್ಪ ಗೊಂದಲವಿದೆ. ಒಂದು ಕಡೆ ರಾಹುಲ್ ಗಾಂಧಿ ಒಪ್ಪುತ್ತಿಲ್ಲ, ಪಾಪ ಮೇಡಂ ಅವರಿಗೆ ಆರೋಗ್ಯ ಸರಿಯಿಲ್ಲ ಎಂದರು.
ಪತ್ರಿಕಾರಂಗ ಮಹತ್ವ ಪಡೆದಿದೆ :ಸಂವಿಧಾನದ ಅಂಗವಾಗಿರುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಜೊತೆಗೆ ಪತ್ರಿಕಾರಂಗ ಜನರಿಂದ ಮಹತ್ವ ಪಡೆದಿದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಿಂತ ಮಾಧ್ಯಮ ಮುಖ್ಯ. ಮಾಧ್ಯಮದ ಬೆಳವಣಿಗೆ ಕಂಡಿದೆ. ಇದಕ್ಕೆ ನಿರ್ಬಂಧ, ಅಡೆ-ತಡೆಗಳನ್ನು ಹಾಕುವುದು ಸರಿ ಅಲ್ಲ. ನಾನು ಸ್ಪೀಕರ್ ಇದ್ದಾಗಲೂ ಎಡಿಟೆಟ್ ವಿಡಿಯೋ ಮಾತ್ರ ಕೊಡೋಣ ಎಂದು ಹೇಳಲಾಗಿತ್ತು. ನಾನು ಅದಕ್ಕೆ ಒಪ್ಪಲಿಲ್ಲ, ಜನರಿಗೆ ನಮ್ಮ ಸುದ್ದಿ ತಲುಪಬೇಕು ಎನ್ನುವುದು ಮುಖ್ಯ. ನಾನು ಎಷ್ಟು ದಿನ ಸ್ಪೀಕರ್ ಆಗಿದ್ದೆನೋ ಅಷ್ಟು ದಿನ ಬಿಜೆಪಿ ನಾಯಕರಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದೆ.
ಈಗಿನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಯಾಕೆ ಈ ನಿರ್ಧಾರ ಮಾಡಿದ್ದಾರೋ ಅಥವಾ ಯಾರ ಒತ್ತಡಕ್ಕೆ ಮಣಿದರೋ ಗೊತ್ತಿಲ್ಲ. ಸದನದಲ್ಲಿ ನಡೆಯುವುದು ಎಡಿಟ್ ಆಗಿ ಸಿಗಬಾರದು, ಏನ್ ನಡೆಯುತ್ತೋ ಅದು ಜನರಿಗೆ ತಲುಪಬೇಕು. ಶಾಸಕರ ಭವನಕ್ಕೂ ಕೂಡ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದಾರೆ. ಇದು ಸರಿಯಾದ ನಿರ್ಧಾರ ಅಲ್ಲ. ಆದಷ್ಟು ಬೇಗ ಇದರ ಬಗ್ಗೆ ಗಮನ ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದರು. ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಈವರೆಗೂ ಕಾರು ಕೊಟ್ಟಿಲ್ಲ ಎಂದರು.
ಸ್ವಾಮೀಜಿಗಳು ಇತ್ತೀಚೆಗೆ ಧರ್ಮ ಪ್ರಚಾರ ಬಿಟ್ಟು ರಾಜಕೀಯ ಮಾಡಲು ಮುಂದಾಗಿದ್ದಾರೆ. ನಮ್ಮ ಸಮುದಾಯದ ನಾಯಕರಿಗೆ ಸ್ಥಾನಗಳನ್ನು ಕೊಡಬೇಕು ಎಂದು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭ ಮಾಡಿದ್ದಾರೆ. ಇದು ಸರಿಯಾದ ಬೆಳವಣಿಗೆ ಅಲ್ಲ, ಸ್ವಾಮೀಜಿಗಳು ಧರ್ಮ ಪ್ರಚಾರ ಮಾತ್ರ ಮಾಡಬೇಕು. ಅದು ಬಿಟ್ಟು ರಾಜಕೀಯ ಮಾಡಬಾರದು ಎಂದು ಹೇಳಿದ್ದಾರೆ.