ಕರ್ನಾಟಕ

karnataka

ETV Bharat / state

ನ್ಯಾಯಾಧೀಶರಿಗೆ ಸ್ವಂತ ನಿಲುವಿರುವುದಿಲ್ಲ; ಹೈಕೋರ್ಟ್ ಹೀಗೆ ಹೇಳಿದ್ದೇಕೆ!? - Pregnancy Death highcourt news

ನ್ಯಾಯಾಧೀಶರು ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳನ್ನು ವಿಚಾರಣೆ ನಡೆಸುವಾಗ ಭಾವೋದ್ರೇಕಕ್ಕೆ ಒಳಗಾಗಬಾರದು. ಹಾಗೆಯೇ ಬಹಳ ಎಚ್ಚರಿಕೆಯಿಂದ ಸಾಕ್ಷ್ಯಗಳನ್ನು ಪರಿಗಣಿಸಿ ಆದೇಶ ನೀಡಬೇಕು. ಭಾವೋದ್ವೇಗಕ್ಕೆ ಕಾನೂನಿನಲ್ಲಿ ಮಹತ್ವವಿಲ್ಲ ಎಂದು ನ್ಯಾ.ಎಸ್ ಸುನಿಲ್ ದತ್ ಯಾದವ್ ಹಾಗೂ ನ್ಯಾ. ಪಿ. ಕೃಷ್ಣ ಭಟ್ ಅವರಿದ್ದ ಅಭಿಪ್ರಾಯಪಟ್ಟಿದೆ.

high court
ಹೈಕೋರ್ಟ್

By

Published : Oct 29, 2020, 9:50 PM IST

ಬೆಂಗಳೂರು: ’’ನ್ಯಾಯಾಧೀಶರಿಗೆ ಸ್ವಂತ ನಿಲುವು ಇರುವುದಿಲ್ಲ. ಹೀಗಾಗಿ ಅಪರಾಧ ಪ್ರಕರಣಗಳನ್ನು ವಿಚಾರಣೆ ನಡೆಸುವಾಗ ನ್ಯಾಯಾಧೀಶರು ಯಾವುದೇ ಉದ್ವಿಗ್ನತೆಗೆ ಒಳಗಾಗದೇ ಮತ್ತು ಜಾಗರೂಕರಾಗಿ ಇರಬೇಕು ಎಂದು ತುಂಬು ಗರ್ಭಿಣಿಯೊಬ್ಬರ ಸಾವಿನ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸುವಾಗ ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.

ಗರ್ಭಿಣಿಯನ್ನ ಕೊಲೆ ಮಾಡಿದ ಆರೋಪದಡಿ ಶಿಕ್ಷೆಗೆ ಒಳಗಾಗಿದ್ದ ಪತಿ ಹಾಗೂ ಆತನ ತಮ್ಮ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ತೀರ್ಪು ನೀಡುವ ವೇಳೆ ನ್ಯಾ.ಎಸ್ ಸುನಿಲ್ ದತ್ ಯಾದವ್ ಹಾಗೂ ನ್ಯಾ. ಪಿ. ಕೃಷ್ಣ ಭಟ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ನ್ಯಾಯಮೂರ್ತಿಗಳು ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳನ್ನು ವಿಚಾರಣೆ ನಡೆಸುವಾಗ ಭಾವೋದ್ವೇಗಕ್ಕೆ ಒಳಗಾಗಬಾರದು. ಹಾಗೆಯೇ ಬಹಳ ಎಚ್ಚರಿಕೆಯಿಂದ ಸಾಕ್ಷ್ಯಗಳನ್ನು ಪರಿಗಣಿಸಿ ಆದೇಶ ನೀಡಬೇಕು. ಭಾವೋದ್ರೇಕಕ್ಕೆ ಕಾನೂನಿನಲ್ಲಿ ಮಹತ್ವವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣದ ಹಿನ್ನೆಲೆ :
2013ರ ಜುಲೈ 2ರಂದು ವಿಜಯಪುರ ಜಿಲ್ಲೆಯ ಅಥಣಿ ತಾಲೂಕಿನ ಹೊನವಾಡ ಗ್ರಾಮದಲ್ಲಿ 7 ತಿಂಗಳ ಗರ್ಭಿಣಿ ಲಕ್ಷ್ಮಿ ಸಾವನ್ನಪ್ಪಿದ್ದರು. ಈ ಸಂಬಂಧ ಪೋಷಕರು ತಿಕೋಟ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನಲ್ಲಿ ಪತಿ ಯಂಕಪ್ಪ, ಆತನ ಸೋದರ ಹಣಮಂತ ಹಾಗೂ ಇವರ ಪೋಷಕರು ಲಕ್ಷ್ಮಿಗೆ ನಿಂದಿಸುತ್ತಿದ್ದರು. ನೋಡಲು ಚೆನ್ನಾಗಿಲ್ಲ, ಮನೆ ನಿಭಾಯಿಸಲು ಬರುವುದಿಲ್ಲ ಎಂದೆಲ್ಲ ಮೂದಲಿಸುತ್ತಿದ್ದರು. ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸುತ್ತಿದ್ದರು ಎಂದು ಆರೋಪಿಸಲಾಗಿತ್ತು.

ಜುಲೈ 2ರ ಸಂಜೆ 4 ಗಂಟೆ ಸುಮಾರಿಗೆ ಇದೇ ವಿಚಾರವಾಗಿ ಜಗಳವಾಗಿ ಲಕ್ಷ್ಮಿ ಅಳುತ್ತಾ ಕೂತಿದ್ದಳು. ಈ ಸಂದರ್ಭದಲ್ಲಿ ಪತಿ ಯಂಕಪ್ಪ ಪತ್ನಿ ಅಡುಗೆ ಮಾಡಲು ಸೂಚಿಸಿದ್ದ. ಆದರೆ, ಲಕ್ಷ್ಮಿ ಸ್ಥಳದಿಂದ ಕದಲಿರಲಿಲ್ಲ. ಇದರಿಂದ ಕೋಪಗೊಂಡ ಪತಿ ಯಂಕಪ್ಪ ಆಕೆಗೆ ಥಳಿಸಿದ್ದ. ಹಾಗೆಯೇ ಆತನ ಸೋದರ ಹಣಮಂತನೂ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ, ಥಳಿಸಿದ್ದ. ಇದೇ ವೇಳೆ ಸಂಬಂಧಿ ಕರೆಪ್ಪ ಬಿಡಿಸಲು ಹೋದಾಗ ಆತನಿಗೂ ಥಳಿಸಿದ್ದರು. ನಂತರ ಲಕ್ಷ್ಮಿಗೆ ಮತ್ತಷ್ಟು ಥಳಿಸಿ ಸಮೀಪದ ಬಾವಿಯವರೆಗೂ ಎಳೆದೊಯ್ದು ಬಾವಿಗೆ ಎಸೆದಿದ್ದರು. ಈ ವಿಚಾರವನ್ನು ಬಹಿರಂಗಪಡಿಸದಂತೆ ಕರೆಪ್ಪನಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿತ್ತು.

ವಿಚಾರಣಾ ನ್ಯಾಯಾಲಯದ ಆದೇಶ :
ದೂರಿನ ಸಂಬಂಧ ಐಪಿಸಿ ಸೆಕ್ಷನ್ 302, 498(ಎ), 34ರ ಅಡಿ ಎಫ್ಐಆರ್ ದಾಖಲಿಸಿದ್ದ ತಿಕೋಟ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ವಿಜಯಪುರದ ಎರಡನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಲಕ್ಷ್ಮಿ ತಂದೆ, ತಾಯಿ, ಸೋದರಿ, ಸಂಬಂಧಿಗಳು ವ್ಯತಿರಿಕ್ತ ಹೇಳಿಕೆ ನೀಡಿದ್ದರು. ಲಕ್ಷ್ಮಿಗೆ ಹೊಟ್ಟೆ ನೋವಿತ್ತು. ಅದರಿಂದ ಸಾವನ್ನಪ್ಪಿರಬಹುದು ಎಂದು ಹೇಳಿಕೆ ನೀಡಿದ್ದರು. ತಹಶೀಲ್ದಾರ್ ಕೂಡ ಆರೋಪಿಗಳ ವಿರುದ್ಧ ಯಾವುದೇ ಆರೋಪ ಮಾಡಿರಲಿಲ್ಲ. ಇನ್ನು ವೈದ್ಯಕೀಯ ವರದಿ ನೀಡಿದ್ದ ವೈದ್ಯಾಧಿಕಾರಿಗಳು ಮೃತ ದೇಹದ ಮೇಲೆ ಗಾಯಗಳಾಗಿವೆ. ಆದರೆ, ಇದರಿಂದಲೇ ಹತ್ಯೆ ನಡೆದಿದೆ ಎಂಬುದನ್ನು ನಿಖರವಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದರು.

ಪ್ರತಿಕೂಲ ಸಾಕ್ಷ್ಯ ನುಡಿದಿದ್ದಾರೆಂದು ಅಭಿಪ್ರಾಯಪಟ್ಟಿದ್ದ ನ್ಯಾಯಾಲಯ ಸಾವಿನ ರೀತಿಯನ್ನು ಗಮನಿಸಿದರೆ ಇದು ಹತ್ಯೆಯೇ ಆಗಿದೆ ಎಂದು ಭಾವಿಸಿತ್ತು. ಅಲ್ಲದೇ, 7 ತಿಂಗಳ ತುಂಬು ಗರ್ಭಿಣಿ ಹತ್ಯೆ ಮಾಡಿದ್ದಾರೆ. ಮಹಿಳೆಯಷ್ಟೇ ಅಲ್ಲ ಆಕೆಯ ಗರ್ಭದಲ್ಲಿದ್ದ ಮಗುವನ್ನೂ ಕೊಂದಿದ್ದಾರೆ. ಒಂದು ವೇಳೆ ಅವರಿಗೆ ಲಕ್ಷ್ಮಿ ಬಗ್ಗೆ ಪ್ರೀತಿ ಇದ್ದಿದ್ದರೆ ಅವರು ಬಾವಿಗೆ ಬಿದ್ದಾಗ ರಕ್ಷಿಸಲು ಪ್ರಯತ್ನಿಸುತ್ತಿದ್ದರು. ಗ್ರಾಮದವರ ನೆರವಿಗಾಗಿ ಅತ್ತು ಕೂಗಿ ಕರೆಯುತ್ತಿದ್ದರು. ಅದ್ಯಾವುದನ್ನೂ ಆರೋಪಿಗಳು ಮಾಡಿಲ್ಲ.

ಗರ್ಭಿಣಿ ಮಹಿಳೆ ಮದುವೆಯಾದ 3 ವರ್ಷಗಳಲ್ಲೇ ಪತಿಯ ಮನೆಯಲ್ಲಿ ಮೃತಪಟ್ಟಿದ್ದಾಳೆ. ಆಕೆಯ ದೇಹದ ಬಲಭಾಗದ ಮೇಲೆ ತರಚಿದ ಗಾಯಗಳಾಗಿವೆ. ಆಕೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದಕ್ಕೆ ಕಾರಣಗಳಿಲ್ಲ. ಹಾಗೆಯೇ ಆರೋಪಿಗಳು 2013ರ ಜುಲೈ 10ವರಗೆ ಬಂಧನಕ್ಕೆ ಒಳಗಾಗುವವರೆಗೂ ತಲೆ ಮರೆಸಿಕೊಂಡಿದ್ದರು ಎಂಬ ಕಾರಣಗಳ ಆಧಾರದ ಮೇಲೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿತ್ತು.

ಹೈಕೋರ್ಟ್ ತೀರ್ಪು :

ಶಿಕ್ಷೆಗೆ ಗುರಿಯಾಗಿದ್ದ ಯಂಕಪ್ಪ ಹಾಗೂ ಹಣಮಂತ ಇಬ್ಬರೂ ಎರಡನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ 2014ರ ಡಿಸೆಂಬರ್ 31 ರಂದು ನೀಡಿದ್ದ ತೀರ್ಪು ಪ್ರಶ್ನಿಸಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ, ಎಸ್. ಸುನಿಲ್ ದತ್ ಯಾದವ್ ನೇತೃತ್ವದ ವಿಭಾಗೀಯ ಪೀಠ, ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಗರ್ಭಿಣಿಯ ಸಾವಿನ ವಿಚಾರದಲ್ಲಿ ಭಾವೋದ್ವೇಗಕ್ಕೆ ಒಳಗಾಗಿರುವಂತೆ ಕಾಣುತ್ತಿದೆ. ಹಾಗೆಯೇ ಬಲವಾದ ಅನುಮಾನದ ಆಧಾರದಲ್ಲಿ ಶಿಕ್ಷೆ ವಿಧಿಸಿದ್ದಾರೆ. ಆದರೆ ನ್ಯಾಯಾಲಯ ನಿರ್ಣಯಕ್ಕೆ ಬರುವ ಮುನ್ನ ಸಾಕ್ಷ್ಯಗಳು ಮತ್ತು ದಾಖಲೆಗಳನ್ನು ಪರಿಗಣಿಸಬೇಕು. ಕಾನೂನು ಅನುಮಾನದ ಆಧಾರದ ಮೇಲೆ ಶಿಕ್ಷಿಸುವುದನ್ನು ಒಪ್ಪುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಅಲ್ಲದೇ, ವಿಚಾರಣಾ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿರುವ ವ್ಯಕ್ತಿಗಳು ಆರೋಪಿಗಳ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಸ್ಥಳೀಯ ತಹಶೀಲ್ದಾರ್ ಕೂಡ ಆರೋಪಿಗಳ ವಿರುದ್ಧ ವರದಿ ಹಾಗೂ ಹೇಳಿಕೆ ನೀಡಿಲ್ಲ. ವೈದ್ಯಕೀಯ ವರದಿಯಲ್ಲಿ ಗಾಯಗಳ ಕರಿತು ಮಾಹಿತಿ ಇದೆಯೇ ಹೊರತು ಹತ್ಯೆ ನಡೆದಿದೆ ಎಂಬುದನ್ನು ಸಾಬೀತು ಮಾಡುವಂತಹ ಸಾಂದರ್ಭಿಕ ಸಾಕ್ಷ್ಯವಿಲ್ಲ. ಪ್ರಾಸಿಕ್ಯೂಷನ್ ಕೂಡ ಸಾಂದರ್ಭಿಕ ಸಾಕ್ಷ್ಯಗಳನ್ನು ಒದಗಿಸಿಲ್ಲ. ಹೀಗಾಗಿ ಬಲವಾದ ಅನುಮಾನದ ಆಧಾರದ ಮೇಲೆ ಆರೋಪಿಗಳಿಗೆ ಕೊಲೆ ಹಾಗೂ ವರದಕ್ಷಿಣೆ ಕಿರುಕುಳ ಆರೋಪದಡಿ ನೀಡಿರುವ ಶಿಕ್ಷೆ ಸೂಕ್ತವೆನ್ನಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ ವಿಧಿಸಿರುವ ಶಿಕ್ಷೆಯನ್ನು ರದ್ದುಗೊಳಿಸಲಾಗುತ್ತಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ABOUT THE AUTHOR

...view details