ಬೆಂಗಳೂರು: ಜೆಡಿಎಸ್ ಡಬಲ್ ಸ್ಟ್ಯಾಂಡ್ ಸಂಸ್ಕೃತಿ ಹೊಂದಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್ ಆರ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಗೆ ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ಪಡೆಯುವಲ್ಲಿ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ನೀಡಿರುವ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾಯ್ದೆ ವಿರುದ್ಧದ ಭಾರತ್ ಬಂದ್ಗೆ ಬೆಂಬಲ ನೀಡಿದ್ದ ಜೆಡಿಎಸ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆದರೆ ಸಂಜೆ ವೇಳೆಗೆ ವಿಧಾನ ಪರಿಷತ್ನಲ್ಲಿ ಸರ್ಕಾರದ ಜೊತೆ ಕೈ ಜೋಡಿಸಿದ್ದಾರೆ. ಇದು ಜೆಡಿಎಸ್ ಪಕ್ಷದ ಡಬಲ್ ಸ್ಟ್ಯಾಂಡ್ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠಎಚ್ ಡಿ ದೇವೇಗೌಡ ಮತ್ತು ಎಚ್ ಡಿ ಕುಮಾರಸ್ವಾಮಿ ಅವರು ತಮ್ಮನ್ನು ತಾವು ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುತ್ತಾರೆ. ಮಣ್ಣಿನ ಮಕ್ಕಳು ಎಂದು ಕರೆದುಕೊಳ್ಳುವವರು ದೇಶದ ನಿಜವಾದ ಮಣ್ಣಿನ ಮಕ್ಕಳಿಗೆ ಕೊಡುವ ಗೌರವ ಇದೇನಾ? ನಿಮ್ಮ ರೈತ ಪರ ಕಾಳಜಿ ಇದೇನಾ? ಜೆಡಿಎಸ್ ನ ಡಬಲ್ ಸ್ಟ್ಯಾಂಡ್ ಸಂಸ್ಕೃತಿಗೆ ಧಿಕ್ಕಾರ ಎಂದು ಕಿಡಿಕಾರಿದ್ದಾರೆ.
ಓದಿ:ವಿಧಾನಸಭೆಯಲ್ಲಿ 3,320.40 ಕೋಟಿ ರೂ. ಮೊತ್ತದ ಪೂರಕ ಅಂದಾಜು ಮಂಡನೆ
ವಿಧಾನ ಪರಿಷತ್ನಲ್ಲಿ ಕಳೆದ ಎರಡು ದಿನಗಳಿಂದ ತೀವ್ರ ಚರ್ಚೆಯಾಗಿದ್ದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ಇಂದು ಜೆಡಿಎಸ್ ಸಹಕಾರದೊಂದಿಗೆ ಅನುಮೋದನೆ ಪಡೆದಿದೆ. ಸಪ್ಟೆಂಬರ್ ತಿಂಗಳಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿದ್ದ ಈ ಮಸೂದೆ ವಿಧಾನಪರಿಷತ್ ಅನಿರ್ದಿಷ್ಟ ಕಾಲಾವಧಿಗೆ ಮುಂದೂಡಿಕೆ ಆದ ಹಿನ್ನೆಲೆ ಅನುಮೋದನೆ ಪಡೆಯದೆ ಹಾಗೆಯೇ ಉಳಿದಿತ್ತು. ಈ ಹಿನ್ನೆಲೆ ಚಳಿಗಾಲದ ಅಧಿವೇಶನ ನಿನ್ನೆ ಆರಂಭವಾದ ಸಂದರ್ಭದಲ್ಲಿ ವಿಧೇಯಕವನ್ನು ಕಂದಾಯ ಸಚಿವ ಆರ್. ಅಶೋಕ್ ಮಂಡಿಸಿದ್ದರು. ಸೋಮವಾರ ಹಾಗೂ ಮಂಗಳವಾರ ಸುದೀರ್ಘ ಚರ್ಚೆ ನಡೆದ ನಂತರ ವಿಧೇಯಕ ಅನುಮೋದನೆ ಪಡೆದಿದೆ. ವಿವೇಕ ಜಾರಿಗೆ ಬರುವುದನ್ನು ತೀವ್ರವಾಗಿ ವಿರೋಧಿಸಿದ್ದ ಕಾಂಗ್ರೆಸ್ಗೆ ಪರಿಷತ್ನಲ್ಲಿ ನಿನ್ನೆ ಸೋಲಾಗಿದ್ದು ಸಹಜವಾಗಿ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಗೆ ಇದು ಬೇಸರ ತರಿಸಿದೆ. ಹೀಗಾಗಿ ಅವರು ಜೆಡಿಎಸ್ ನಿಲುವನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ.