ಬೆಂಗಳೂರು : ರುಚಿಕಟ್ಟಾದ ಅಡುಗೆ ಮಾಡುವುದಿಲ್ಲ ಎಂದು ಪತ್ನಿಗೆ ದೊಣ್ಣೆಯಿಂದ ಹಲ್ಲೆ ಮಾಡಿ ಪತಿಯೇ ಕೊಲೆ ಮಾಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತರಬನಹಳ್ಳಿಯ ಪತ್ನಿ ಶಿರಿನ್ ಬಾನು (25) ಕೊಲೆಯಾದ ಮಹಿಳೆ. ಕೊಲೆ ಆರೋಪಿ ಮುಬಾರಕ್ (32)ನನ್ನು ಪೊಲೀಸರು ಬಂಧಿಸಿದ್ದಾರೆ.
ಅಡುಗೆ ವಿಷಯಕ್ಕೆ ಕ್ಯಾತೆ:
ದಂಪತಿ ಮೂಲತಃ ದಾವಣಗೆರೆಯವರಾಗಿದ್ದು, ಎರಡು ವರ್ಷಗಳ ಹಿಂದೆ ವಿವಾಹವಾದ ಬಳಿಕ ನಗರದ ಸೋಲದೇವನಹಳ್ಳಿಯ ತರಬನಹಳ್ಳಿಯಲ್ಲಿ ನೆಲೆಸಿದ್ದರು. ಮುಬಾರಕ್ ಹಾಸಿಗೆ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದ. ಆದರೆ, ಅಡುಗೆ ವಿಷಯಕ್ಕೆ ಕ್ಯಾತೆ ತೆಗೆಯುತ್ತಿದ್ದ ಮುಬಾರಕ್ ಪತ್ನಿಗೆ ಮನಬಂದಂತೆ ಹಲ್ಲೆ ನಡೆಸುತ್ತಿದ್ದ.
ಪತಿಯ ಕಿರುಕುಳ ತಾಳಲಾರದ ಪತ್ನಿ ಶಿರಿನ್ ಬಾನು ತನ್ನ ಪೋಷಕರ ಬಳಿ ವ್ಯಥೆ ತೋಡಿಕೊಂಡಿದ್ದಳು. ಇದಾದ ಬಳಿಕ ಹಿರಿಯರೆಲ್ಲರೂ ಸೇರಿ ದಂಪತಿ ನಡುವೆ ಸಂಧಾನ ಮಾಡಿ ಕೂಡಿ ಬಾಳುವಂತೆ ಬುದ್ಧಿ ಹೇಳಿದ್ದರು. ಆದರೆ, ಮುಬಾರಕ್ ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿದ್ದ.