ಬೆಂಗಳೂರು : ಸುದ್ದಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ನಾಝ್ ಎಂಬ ಮಹಿಳೆ ಕೊಲೆ ಪ್ರಕರಣದ ಆರೋಪಿ ಅಕ್ರಮ ಬಾಂಗ್ಲಾ ವಲಸಿಗ ಎಂಬುದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ. ಜನವರಿ 16ರಂದು ತಾವರೆಕೆರೆಯ ಸುಭಾಷ್ ನಗರದ ಮನೆಯಲ್ಲಿ ಪತ್ನಿ ನಾಝ್ ಎಂಬಾಕೆಯನ್ನು ಹತ್ಯೆಗೈದು ಪರಾರಿಯಾಗಿದ್ದ ಆರೋಪಿ ನಾಸೀರ್ ಹೊಸೈನ್ ನನ್ನು ಸುದ್ದಗುಂಟೆಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ತನಿಖೆ ವೇಳೆ ಆರೋಪಿ ಭಾರತೀಯನೇ ಅಲ್ಲ ಎಂಬ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.
ಆರೋಪಿ ಅಕ್ರಮ ಬಾಂಗ್ಲಾ ವಲಸಿಗ :ಢಾಕಾದಲ್ಲಿ ಹಾರ್ಡ್ವೇರ್ ಇಂಜಿನಿಯರಿಂಗ್ ತರಬೇತಿ ಪಡೆದಿದ್ದ ಆರೋಪಿ ಪದವಿ ಪೂರ್ಣಗೊಳಿಸಿರಲಿಲ್ಲ. ಆದರೆ ಲ್ಯಾಪ್ಟಾಪ್, ಮೊಬೈಲ್ ರಿಪೇರಿಯಲ್ಲಿ ಪರಿಣಿತಿ ಹೊಂದಿದ್ದ. ಅದರಲ್ಲೂ ಆ್ಯಪಲ್ ಕಂಪನಿಯ ಕಂಪ್ಯೂಟರ್, ಲ್ಯಾಪ್ಟಾಪ್ ರಿಪೇರಿಯಲ್ಲಿ ಹೆಚ್ಚಿನ ಪರಿಣಿತಿ ಹೊಂದಿದ್ದ.
ಪತ್ನಿಯ ಶೀಲ ಶಂಕಿಸಿ ಉಸಿರುಗಟ್ಟಿಸಿ ಕೊಲೆಗೈದ ಆರೋಪಿ :ಸಿಲಿಗುರಿ ಮೂಲಕ ಕೋಲ್ಕತ್ತಾಗೆ ಆಗಮಿಸಿದ್ದ ಆರೋಪಿ ಸುಳ್ಳು ದಾಖಲಾತಿ ಸೃಷ್ಟಿಸಿಕೊಂಡು ಮುಂಬೈ, ದೆಹಲಿ ಸೇರಿದಂತೆ ಗುರ್ಗಾಂವ್ ನಲ್ಲಿ ತನ್ನದೇ ಮೊಬೈಲ್ ರಿಪೇರಿ ಅಂಗಡಿ ತೆರೆದು ವ್ಯವಹಾರ ಆರಂಭಿಸಿದ್ದ. 2019ರಲ್ಲಿ ಬೆಂಗಳೂರಿಗೆ ಬಂದು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ತಿಂಗಳಿಗೆ 75 ಸಾವಿರ ಸಂಬಳವನ್ನು ಪಡೆಯುತ್ತಿದ್ದ. ಭಾರತದ ದೆಹಲಿ ವಿಳಾಸದಲ್ಲಿ ಆಧಾರ್, ಪಾನ್ ಕಾರ್ಡ್, ಕೋಲ್ಕತ್ತಾದ ವಿಳಾಸದಲ್ಲಿ ಪಾನ್ ಕಾರ್ಡ್ ಹಾಗೂ ಬೆಂಗಳೂರು ವಿಳಾಸದಲ್ಲಿ ವೋಟರ್ ಐಡಿ ಹೊಂದಿರುವ ಆರೋಪಿ ತನ್ನ ಬಗ್ಗೆ ಯಾವುದೇ ಮಾಹಿತಿ ನೀಡದೇ ನಾಝ್ ಎಂಬಾಕೆಯನ್ನು ವಿವಾಹವಾಗಿದ್ದ. 6 ತಿಂಗಳ ದಾಂಪತ್ಯ ಜೀವನದ ಬಳಿಕ ಪತ್ನಿಯ ಶೀಲ ಶಂಕಿಸಿದ್ದ ಆರೋಪಿ ಆಕೆಯನ್ನು ಉಸಿರುಗಟ್ಟಿಸಿ ಕೊಲೆಗೈದು ಪರಾರಿಯಾಗಿದ್ದ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ಮಾಹಿತಿ ನೀಡಿದ್ದಾರೆ.