ಮಳೆಯಿಂದ ವಿಧಾನಸೌಧ-ರಾಜಭವನ ಮಧ್ಯದ ಬೃಹತ್ ಕಾಂಪೌಂಡ್ ಕುಸಿತ ಬೆಂಗಳೂರು:ವಿಧಾನಸೌಧದ ಉತ್ತರ ಭಾಗಕ್ಕೆ ಹೊಂದಿಕೊಂಡಿರುವ ರಾಜಭವನ ಕಾಂಪೌಂಡ್ ಕುಸಿದ ಘಟನೆ ನಡೆದಿದೆ. ಇಂದು ಬೆಳಗ್ಗೆ ಸುಮಾರು 10.30 ಗಂಟೆಗೆ ತಡೆಗೋಡೆ ಕುಸಿದು ಬಿದ್ದಿದೆ. ಸುಮಾರು 5 ಮೀಟರ್ ಎತ್ತರದ ತಡೆಗೋಡೆ ಕುಸಿದು ಬಿದ್ದಿದೆ. ಸುಮಾರು 25 ಮೀಟರ್ ಉದ್ದಕ್ಕೆ ಗೋಡೆ ಕುಸಿದಿದೆ. ಸುಮಾರು 15 ವರ್ಷಕ್ಕೂ ಹಿಂದೆ ಇಟ್ಟಿಗೆಯಿಂದ ಕಟ್ಟಿರುವ ತಡೆಗೋಡೆ ಇದಾಗಿದೆ.
ನಿನ್ನೆ ಸುರಿದ ಮಳೆಯಿಂದ ತೇವಗೊಂಡು ತಡೆಗೋಡೆ ಕುಸಿತವಾಗಿದೆ. ವಿಧಾನಸೌಧ ಉತ್ತರ ಭಾಗದ ಕಡೆಗೆ ರಾಜಭವನಕ್ಕೆ ಹೊಂದಿಕೊಂಡಿರುವ ಕಾಂಪೌಂಡ್ ಇದಾಗಿದೆ. ಆಲದ ಮರದ ಬೇರಿನಿಂದ ತಡೆಗೋಡೆ ದುರ್ಬಲಗೊಂಡು ಏಕಾಏಕಿ ಕುಸಿತವಾಗಿದೆ.
ತಡೆಗೋಡೆ ಬಳಿ ಪಾರ್ಕ್ ಇದ್ದು, ಸಿಬ್ಬಂದಿ ಗಾರ್ಡನಿಂಗ್ ಕೆಲಸ ಮಾಡುತ್ತಿದ್ದರು. ಅದೃಷ್ಟವಶಾತ್ ಸಿಬ್ಬಂದಿ ಘಟನೆ ನಡೆದ ಸ್ವಲ್ಪ ದೂರದಲ್ಲಿ ಕೆಲಸ ಮಾಡುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ. ಸದ್ಯ ರಾಜಭವನ ಗೋಡೆ ಕುಸಿದ ಕಾರಣ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ರಾಜಭವನಕ್ಕೆ ಅಕ್ರಮ ಪ್ರವೇಶಿಸಿದಂತೆ ಭದ್ರತೆ ಒದಗಿಸಲಾಗಿದೆ.
ಪಾರ್ಕ್ಗೆ ಸಾರ್ವಜನಿಕರು ಪ್ರವೇಶಿಸದಂತೆ ಬ್ಯಾರಿಕೇಡ್ ಹಾಕಲಾಗಿದೆ. ಈ ಗೋಡೆಯನ್ನು ಸುಮಾರು 15 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ವಿಧಾನಸೌಧ ಲೋಕೋಪಯೋಗಿ ಅಧಿಕಾರಿಗಳು ಹಾಗೂ ರಾಜಭವನ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಪಾಸಣೆ ಮಾಡುತ್ತಿದ್ದಾರೆ. ಸದ್ಯ ತಾತ್ಕಾಲಿಕವಾಗಿ ಟಿನ್ ಹಾಕಿ ಮುಚ್ಚಲಾಗುತ್ತದೆ ಎಂದು ತಿಳಿದುಬಂದಿದೆ.