ಬೆಂಗಳೂರು: 2020-21ನೇ ಆರ್ಥಿಕ ವರ್ಷದ ಮೊದಲ ಪೂರಕ ಅಂದಾಜನ್ನು ರಾಜ್ಯ ಸರ್ಕಾರ ಮಂಡಿಸಿದ್ದು, 4008 ಕೋಟಿ ರೂ. ಮೊತ್ತದ ಪೂರಕ ಅಂದಾಜುಗಳಿಗೆ ಗುರುವಾರ ವಿಧಾನಸಭೆ ಅಂಗೀಕಾರ ನೀಡಿದೆ.
ಸಿಎಂ ಯಡಿಯೂರಪ್ಪ ಪರವಾಗಿ ಪೂರಕ ಅಂದಾಜುಗಳನ್ನು ಮಂಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ, ಕೊರೊನಾ ಸಂಕಷ್ಟದಿಂದಾಗಿ ಅಗತ್ಯ ವೆಚ್ಚಗಳಿಗಾಗಿ ಮೊದಲ ಕಂತಿನ ಪೂರಕ ಅಂದಾಜುಗಳನ್ನು ಮಂಡಿಸಿ ಒಪ್ಪಿಗೆ ಪಡೆದರು.
ಪೂರಕ ಅಂದಾಜಿನ ಪ್ರಕಾರ ಸರ್ಕಾರಿ ಆಸ್ಪತ್ರೆಗೆ ಕೊರೊನಾ ವೈದ್ಯಕೀಯ ಸಲಕರಣೆ ಮತ್ತಿತರ ವೆಚ್ಚಗಳಿಗೆ 1090 ಕೋಟಿ ರೂ., ವಿವಿಧ ಸರ್ಕಾರಿ ಸಾರಿಗೆ ನಿಗಮಗಳ ಸಿಬ್ಬಂದಿಗೆ ಲಾಕ್ಡೌನ್ ವೇಳೆ ವೇತನ ನೀಡಲು 543.91 ಕೋಟಿ ರೂ., ವೈದ್ಯಕೀಯ ಕಾಲೇಜುಗಳಲ್ಲಿ ಮೂಲಸೌಕರ್ಯಕ್ಕಾಗಿ 165.7 ಕೋಟಿ ರೂ., ಕೃಷಿ ಉಪಕರಣಗಳ ಖರೀದಿಗೆ 100 ಕೋಟಿ ರೂ., ಆಟೋ ಚಾಲಕರಿಗೆ ಕೊರೊನಾ ಲಾಕ್ಡೌನ್ ಪರಿಹಾರ ನೀಡಲು 97 ಕೋಟಿ ರೂ., ಅಂಗನವಾಡಿಗಳ ದುರಸ್ತಿಗೆ 87 ಕೋಟಿ ರೂ., ವಾರ್ತಾ ಇಲಾಖೆಯಿಂದ ಬಾಕಿಯಿದ್ದ ಬಿಲ್ ಹಣ ಪಾವತಿಸಲು 56 ಕೋಟಿ ರೂ. ಹೀಗೆ ವಿವಿಧ ವೆಚ್ಚಗಳ ಬಾಬ್ತು 4008 ಕೋಟಿ ರೂ. ಪೂರಕ ಅಂದಾಜಿಗೆ ಒಪ್ಪಿಗೆ ಪಡೆಯಲಾಯಿತು.
ಅಧಿಕಾರಿಗಳ ಬೋಗಸ್ ಲೆಕ್ಕ:
ಈ ವೇಳೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಈಗಾಗಲೇ 2.37 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದೀರಿ. ಇದೀಗ 4008 ಕೋಟಿ ರೂಪಾಯಿ ಪೂರಕ ಅಂದಾಜು ಮಂಡಿಸುತ್ತಿದ್ದೀರಿ. ಈ ಹಣ ಹೇಗೆ ಹೊಂದಿಸುತ್ತೀರಿ? ಹಣ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದರು.
ಬಳಿಕ ಸಿದ್ದರಾಮಯ್ಯ ಅವರೇ ಮಾತು ಮುಂದುವರೆಸಿ, ಮಾಧುಸ್ವಾಮಿ ನಾನೂ 13 ಬಜೆಟ್ ಮಂಡನೆ ಮಾಡಿದ್ದೇನೆ. ಪ್ರತಿ ಬಾರಿ ಈ ರೀತಿ ಪೂರಕ ಅಂದಾಜು ಮಂಡಿಸುವಾಗಲೂ ತೆರಿಗೆ ವಸೂಲಿ ಹೆಚ್ಚಳ ಮಾಡುತ್ತೇವೆ ಎಂದು ಅಧಿಕಾರಿಗಳು ಬೋಗಸ್ ಲೆಕ್ಕ ನೀಡುತ್ತಾರೆ. ನೀವು, ನಾವು ಅದನ್ನು ಸದನದಲ್ಲಿ ಹೇಳುತ್ತೇವೆ. ತೆರಿಗೆ ಹೆಚ್ಚಳವಾಗಲ್ಲ ಬದಲಿಗೆ ವೆಚ್ಚಗಳನ್ನು ಕಡಿತಗೊಳಿಸಿ ಹೊಂದಾಣಿಕೆ ಮಾಡುತ್ತೇವೆ ಅಷ್ಟೇ ಎಂದರು.