ಬೆಂಗಳೂರು: ಕಾಫಿ ಪೌಡರ್‌ನಲ್ಲಿ ಕೆಫೇನ್ ಅಂಶ ಮತ್ತು ಜಲೀಯ ಸಾರ ಮಿಶ್ರಣ ಮಾಡಿ ಮಾರಾಟಕ್ಕೆ ಮುಂದಾಗಿದ್ದ ಸಕಲೇಶಪುರದ ಎಂ.ಎಸ್.ಕಾಫೀ ವರ್ಕ್ಸ್‌ನ ಮಾಲೀಕ ಸಯ್ಯದ್ ಅಹ್ಮದ್ ಎಂಬವರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಆರು ತಿಂಗಳ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಹಾಸನದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಗೆ ಆರು ತಿಂಗಳು ಸಾಧಾರಣ ಶಿಕ್ಷೆ ಮತ್ತು ಒಂದು ಸಾವಿರ ರೂಪಾಯಿಗಳ ದಂಡ ವಿಧಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಯ್ಯದ್ ಹೈಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಬಿ.ಪ್ರಭಾಕರ ಶಾಸ್ತ್ರಿ ನವೆಂಬರ್ 8 ರಂದು ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದ್ದು, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಅಲ್ಲದೇ, ಆರೋಪಿತರು 45 ದಿನಗಳಲ್ಲಿ ಸಕಲೇಶಪುರದ ಜೆಎಂಎಫ್‌ಸಿ ನ್ಯಾಯಾಲಕ್ಕೆ ಹಾಜರಾಗಬೇಕು ಎಂದು ಸೂಚನೆ ನೀಡಿದೆ.
ಪ್ರಕರಣದ ಹಿನ್ನೆಲೆ : ಸಕಲೇಶಪುರದ ಆಹಾರ ನಿರೀಕ್ಷಕರು 2008 ಜೂನ್ 20ರಂದು ಸಯ್ಯದ್ ಅಹ್ಮದ್ ಮಾಲೀಕತ್ವದ ಎಂ.ಎಸ್.ಕಾಫಿ ವರ್ಕ್ಸ್ ಗೆ ಭೇಟಿ ನೀಡಿ ಮಾರಾಟ ಮಾಡುತ್ತಿದ್ದ ಕಾಫಿ ಬೀಜಗಳು ಮತ್ತು ಅದರ ಪುಡಿಯನ್ನು ಪರಿಶೀಲನೆ ನಡೆಸಿದ್ದರು. ಅಲ್ಲದೆ, 600 ಗ್ರಾಂ ಕಾಫಿ ಪುಡಿಯನ್ನು ಖರೀದಿಸಿ ವೈಜ್ಞಾನಿಕ ಪರೀಕ್ಷೆಗೆ ರವಾನಿಸಿದ್ದರು.
ಈ ಪರೀಕ್ಷೆಯಲ್ಲಿ ಕಾಫಿ ಪುಡಿಯಲ್ಲಿ ಕಲಬೆರೆಕೆ ಮಾಡಿರುವುದು ಮತ್ತು ಮಿಸ್ ಬ್ರ್ಯಾಂಡ್ ಮಾಡಿರುವುದು ಬೆಳಕಿಗೆ ಬಂದಿತ್ತು. ಅಲ್ಲದೇ, ಶೇ 0.4 ಕೆಫೀನ್ ಮತ್ತು ಶೇ 55.0 ರಷ್ಟು ಜಲೀಯ ಸಾರ (ನೀರಿನ ಆವಿಯಾಗಿ ಉಳಿಯುವ ಘನ ಅಂಶ) ಅಂಶಗಳು ಇರುವುದು ಖಚಿತವಾಗಿತ್ತು.
ಜೊತೆಗೆ ಮಾರಾಟ ಮಾಡುವ ಸಂದರ್ಭದಲ್ಲಿ ಯಾವುದೇ ರೀತಿಯ ಬ್ಯಾಚ್ ಸಂಖ್ಯೆ ನಮೂದಿಸಿರಲಿಲ್ಲ ಮತ್ತು ಎಷ್ಟು ದಿನಗಳವರೆಗೆ ಬಳಕೆಗೆ ಉತ್ತಮವಾಗಿರಲಿದೆ ಎಂಬುದನ್ನು ಮುದ್ರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಸಯ್ಯದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಸ್ಥಳವನ್ನು ಮಜರು ಮಾಡಿ, ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ಕೋರಿ ಜಿಲ್ಲಾ ಆರೋಗ್ಯಾಧಿಕರಿಗಳಿಗೆ ಮನವಿ ಸಲ್ಲಿಸಿದ್ದರು.