ಬೆಂಗಳೂರು :ಕೊನೆಯ ಕೌನ್ಸಿಲಿಂಗ್ಗೆ ಮುನ್ನವೇ ವಿದ್ಯಾರ್ಥಿ ಸೀಟು ಬಿಟ್ಟುಕೊಟ್ಟಿದ್ದಾರೆ. ಕೋರ್ಸ್‌ನ ಮಧ್ಯಭಾಗದಲ್ಲಿ ಅಲ್ಲ. ಹೀಗಾಗಿ, ವಿದ್ಯಾರ್ಥಿಯಿಂದ ಒಂದು ಸೆಮಿಸ್ಟರ್ ಫೀಸ್ ಕೇಳಬಹುದೇ ಹೊರತು, ಇಡೀ ಕೋರ್ಸ್‌ನ ಶುಲ್ಕವನ್ನಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ವೈದ್ಯಕೀಯ ಪಿಜಿ ಕೋರ್ಸ್‌ನ ಸೀಟನ್ನು ಕೊನೆಯ ಕೌನ್ಸಿಲಿಂಗ್ಗೆ ಮುನ್ನವೇ ಹಿಂದಿರುಗಿಸಿದ್ದರೂ ಕಾಲೇಜು ಆಡಳಿತ ಮಂಡಳಿ ಇಡೀ ಕೋರ್ಸ್‌ನ ಫೀಸ್ ಕೇಳುತ್ತಿದೆ ಎಂದು ಆಕ್ಷೇಪಿಸಿ ಡಾ. ವೈಭವ್ ಖೋಸ್ಲ ಎಂಬುವರು ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಅಲೋಕ್ ಆರಾಧೆ ಹಾಗೂ ನ್ಯಾಯಮೂರ್ತಿ ಎಮ್ ಜಿ ಎಸ್ ಕಮಲ್ ಅವರಿದ್ಧ ಪೀಠ ಈ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನೆಲೆ :ಪಂಜಾಬ್ನ ಅಮೃತ್‌ಸರದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿದ್ದ ಡಾ. ವೈಭವ್ ಖೋಸ್ಲ 2018ರಲ್ಲಿ ಪಿಜಿ ಮಾಡುವ ನಿಟ್ಟಿನಲ್ಲಿ ನೀಟ್ ಪರೀಕ್ಷೆ ಬರೆದಿದ್ದರು. ಈ ವೇಳೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ (ಕೆಇಎ) ನೋಂದಾಯಿಸಿಕೊಂಡಿದ್ದರು. ಬಳಿಕ ಲೂಧಿಯಾನದ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಎಂ.ಎಸ್ ಆರ್ಥೋಪೆಡಿಕ್ಸ್ ಕೋರ್ಸ್ಗೆ 2018ರ ಮೇ.24ರಂದು ದಾಖಲಾಗಿದ್ದರು.
ಈ ನಡುವೆ ಕೆಇಎ ನಡೆಸಿದ ಕೌನ್ಸಿಲಿಂಗ್ನ ಮಾಪ್ ಅಪ್ ರೌಂಡ್ನಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಸೈಕಿಯಾಟ್ರಿ ಕೋರ್ಸ್ಗೆ (ಮನೋವೈದ್ಯಶಾಸ್ತ್ರ) ಸೀಟು ಪಡೆದಿದ್ದರು. ಈ ವೇಳೆ ಮೂಲ ಶೈಕ್ಷಣಿಕ ದಾಖಲೆಗಳ ಜತೆ ಕೋರ್ಸ್ ಶುಲ್ಕವಾಗಿ 7,74,500 ರೂಪಾಯಿಯನ್ನು ಕೆಇಎನಲ್ಲಿ ಠೇವಣಿ ಮಾಡಿದ್ದರು.
ಇದನ್ನೂ ಓದಿ:ಕೋವಿಡ್ ಮಾರ್ಗಸೂಚಿ ಸಡಿಲಿಸಿದ ಹೈಕೋರ್ಟ್ : ಫೆಬ್ರವರಿ 7ರಿಂದ ಹೊಸ ನಿಯಮ ಜಾರಿ
ಅಂತಿಮವಾಗಿ ಲೂಧಿಯಾನದಲ್ಲಿ ಎಂಎಸ್ ಆರ್ಥೋಪೆಡಿಕ್ಸ್ ಕಲಿಯಲು ನಿರ್ಧರಿಸಿದ್ದ ರಾಜರಾಜೇಶ್ವರಿ ಕಾಲೇಜಿನಲ್ಲಿ ಸಿಕ್ಕಿದ್ದ ಸೈಕಿಯಾಟ್ರಿ ಕೋರ್ಸ್‌ನ ಸೀಟು ಹಿಂದಿರುಗಿಸಿರುವುದಾಗಿ ತಿಳಿಸಿ 2018ರ ಮೇ 29ರಂದು ಕೆಇಎ ಹಾಗೂ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿಗೆ ಇ-ಮೇಲ್ ಕಳುಹಿಸಿದ್ದರು. ಬಳಿಕ ತಮ್ಮ ಮೂಲ ಶೈಕ್ಷಣಿಕ ದಾಖಲೆಗಳು ಹಾಗೂ ಠೇವಣಿ ಹಣ ಹಿಂದಿರುಗಿಸುವಂತೆ ಕಾಲೇಜು ಹಾಗೂ ಕೆಇಎಗೆ ಭೇಟಿ ನೀಡಿ ಮನವಿ ಮಾಡಿದ್ದರು.
2018ರ ಜೂನ್ 3ರಂದು ರಾಜರಾಜೇಶ್ವರಿ ಕಾಲೇಜು ಕೋರ್ಸ್ ಬಿಟ್ಟಿದ್ದರಿಂದ 3 ವರ್ಷದ ಕೋರ್ಸ್‌ನ ಪೂರ್ತಿ ಶುಲ್ಕ 25.32 ಲಕ್ಷ ಪಾವತಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಡಾ. ವೈಭವ್ ಖೋಸ್ಲಾ, ತಾನು ಕೋರ್ಸ್‌ನ ಕೊನೆಯ ಸುತ್ತಿನ ಕೌನ್ಸಿಲಿಂಗ್ಗೆ ಮುನ್ನ ಸೀಟು ಬಿಟ್ಟುಕೊಟ್ಟಿದ್ದೇನೆ.
ಕೋರ್ಸ್‌ನ ಕೊನೆಯ ಕೌನ್ಸಿಲಿಂಗ್ಗೆ 2018ರ ಮೇ 31ರ ಕೊನೆಯ ದಿನವಾಗಿತ್ತು. ಆದ್ದರಿಂದ, ಕಾಲೇಜು ಕೋರ್ಸ್‌ನ ಪೂರ್ತಿ ಶುಲ್ಕ ಕೇಳದಂತೆ ಹಾಗೂ ಶೈಕ್ಷಣಿಕ ದಾಖಲೆಗಳು ಹಾಗೂ ಠೇವಣಿಯನ್ನು ಹಿಂದಿರುಗಿಸಲು ನಿರ್ದೇಶಿಸುವಂತೆ ಕೋರಿದ್ದರು. ಇದಕ್ಕೆ ಒಪ್ಪದ ಕಾಲೇಜು ಕೋರ್ಸ್‌ನ ಪೂರ್ತಿ ಶುಲ್ಕ ಪಾವತಿಸಿದರಷ್ಟೇ ದಾಖಲೆಗಳನ್ನು ಹಿಂದಿರುಗಿಸುವುದಾಗಿ ವಾದಿಸಿತ್ತು.
ಹೈಕೋರ್ಟ್ ತೀರ್ಪು :ವಾದ-ಪ್ರತಿವಾದ ಆಲಿಸಿದ ವಿಭಾಗೀಯ ಪೀಠ, ಅರ್ಜಿದಾರ ವಿದ್ಯಾರ್ಥಿ ತಾನು ಪಡೆದಿದ್ದ ಸೀಟನ್ನು ಕೋರ್ಸ್‌ನ ಅಂತಿಮ ಸುತ್ತಿನ ಕೌನ್ಸಿಲಿಂಗ್ಗೆ ಮುನ್ನವೇ ಹಿಂದಿರುಗಿಸಿರುವುದಾಗಿ ತಿಳಿಸಿದ್ದಾರೆ. ಈ ವಿಚಾರದಲ್ಲಿ ಯಾರ ಆಕ್ಷೇಪವೂ ಇಲ್ಲ. ಇನ್ನು ಅರ್ಜಿದಾರ ಕೋರ್ಸ್‌ನ ಮಧ್ಯಭಾಗದಲ್ಲೂ ಬಿಟ್ಟು ಹೋಗಿಲ್ಲ.
ಅದರಂತೆ ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಷನ್ ಅಂಡ್ ಅದರ್ಸ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಅರ್ಜಿದಾರ ವಿದ್ಯಾರ್ಥಿಯಿಂದ 3 ವರ್ಷದ ಕೋರ್ಸ್‌ನ ಸಂಪೂರ್ಣ ಶುಲ್ಕ ಕೇಳಲು ಕಾಲೇಜಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ, 2019ರ ಏಪ್ರಿಲ್‌ನಲ್ಲಿ ಹೈಕೋರ್ಟ್ನ ಮಧ್ಯಂತರ ಆದೇಶದಂತೆ ಅರ್ಜಿದಾರರ ಮೂಲ ಶೈಕ್ಷಣಿಕ ದಾಖಲೆಗಳನ್ನು ಹಿಂದಿರುಗಿಸಲಾಗಿದೆ.
ಇನ್ನು ಅರ್ಜಿದಾರ ಶುಲ್ಕ ವಾಪಸ್ ಕೇಳುವ ಅಧಿಕಾರವನ್ನು ಈ ಹಿಂದೆ ಬಿಟ್ಟುಕೊಟ್ಟಿರುವುದರಿಂದ ಪ್ರಕರಣದಲ್ಲಿ ಯಾವುದೇ ಆದೇಶ ಹೊರಡಿಸುವ ಅವಶ್ಯಕತೆ ಇಲ್ಲವೆಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿದೆ.