ಬೆಂಗಳೂರು :ರಾಜ್ಯದಲ್ಲಿ ಕೊರೊನಾ ಸೋಂಕು ಇರುವ ಕಾರಣ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾಕ್ಕೆ ತರಾಟೆಗೆ ತೆಗೆದುಕೊಂಡಿದೆ.
ರಾಜ್ಯದಲ್ಲಿ ಎಲ್ಲ ಬಗೆಯ ಪಟಾಕಿ ನಿಷೇಧಿಸುವಂತೆ ಕೋರಿ ನಗರದ ಚಾರ್ಟರ್ಡ್ ಅಕೌಂಟೆಂಟ್ ಡಾ. ಎ.ಎಸ್. ವಿಷ್ಣು ಭರತ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರ ಪಟಾಕಿ ಮಾರಾಟಕ್ಕೆ ಸಂಬಂಧಿಸಿದಂತೆ ನವೆಂಬರ್ 6 ಮತ್ತು 10 ರಂದು ಹೊರಡಿಸಿರುವ ಆದೇಶದಲ್ಲಿ ಹಸಿರು ಪಟಾಕಿ ಎಂಬುದಕ್ಕೆ ಸ್ಪಷ್ಟನೆ ನೀಡದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಸರ್ಕಾರ ತನ್ನ ಆದೇಶದಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ ನೀಡಿರುವುದಾಗಿ ತಿಳಿಸಿದೆ. ಆದರೆ, ಹಸಿರು ಪಟಾಕಿ ಎಂದರೇನು. ಇತರೆ ಪಟಾಕಿಗೂ ಹಸಿರು ಪಟಾಕಿಗೂ ಇರುವ ವ್ಯತ್ಯಾಸವೇನು ಎಂಬುದನ್ನೇ ಸ್ಪಷ್ಟಪಡಿಸಿಲ್ಲ. ಜನರು ಹಸಿರು ಪಟಾಕಿ ಯಾವುವು ಎಂಬುದನ್ನು ಹೇಗೆ ಗುರುತಿಸುತ್ತಾರೆ. ಹಸಿರು ಪಟಾಕಿ ಹೆಸರಲ್ಲಿ ಇತರೆ ಪಟಾಕಿಗಳನ್ನು ಮಾರಾಟ ಮಾಡಿದರೆ ಅದನ್ನು ಹೇಗೆ ನಿಯಂತ್ರಿಸಲಾಗುತ್ತದೆ ಎಂದು ಪ್ರಶ್ನಿಸಿದ ಪೀಠ, ಸರ್ಕಾರ ಹೊರಡಿಸಿದ ಆದೇಶ ಗೊಂದಲಮಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿತು.
ಅಲ್ಲದೇ, ಅರ್ಜಿ ಸಲ್ಲಿಕೆ ವಿಳಂಬವಾಗಿದೆ. ಮೊದಲೇ ಅರ್ಜಿ ಸಲ್ಲಿಸಿದ್ದರೆ ಕಠಿಣ ಆದೇಶ ಹೊರಡಿಸುವ ಅವಕಾಶವಿತ್ತು. ಆದರೆ, ಅರ್ಜಿ ಸಲ್ಲಿಕೆ ತಡವಾಗಿದೆ. ಪ್ರಸ್ತುತ ಕೊರೊನಾ ಸಂದರ್ಭದಲ್ಲಿ ಪಟಾಕಿ ಮಾರಾಟದಿಂದ ವಾಯುಮಾಲಿನ್ಯ ಹೆಚ್ಚಿ ಸಮಸ್ಯೆ ಉಲ್ಭಣಿಸುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರ ಪಟಾಕಿ ಮಾರಾಟ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪಟಾಕಿ ಮಾರಾಟ ಮತ್ತು ಬಳಕೆಗೆ ನಿರ್ಬಂಧ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಸಿತು.
ಹಾಗೆಯೇ ಹಸಿರು ಪಟಾಕಿ ಕುರಿತು ನಾಳೆಯೊಳಗೆ ಸ್ಪಷ್ಟನೆ ನೀಡಬೇಕು ಎಂದು ತಿಳಿಸಿ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿತು. ಇದೇ ವೇಳೆ ವಾಯು ಮಾಲಿನ್ಯ ಅಳೆಯಲು ಮತ್ತು ನಿಯಂತ್ರಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೈಗೊಂಡಿರುವ ಕ್ರಮಗಳೇನು ಎಂಬುದ ವಿವರ ನೀಡುವಂತೆ ಸೂಚಿಸಿತು.
ವಿಚಾರಣೆ ಸಂಬಂರ್ಭದಲ್ಲಿ ಅರ್ಜಿದಾರರ ಪರ ವಕೀಲ ಬಿ.ಕೆ ನರೇಂದ್ರ ಬಾಬು ಪೀಠಕ್ಕೆ ಮಾಹಿತಿ ನೀಡಿ, ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಪಟಾಕಿ ನಿರ್ಬಂಧಿಸಿಬೇಕು. ಈಗಾಗಲೇ ಹಲವು ರಾಜ್ಯಗಳಲ್ಲಿ ಪಟಾಕಿ ನಿರ್ಬಂಧಿಸಿ ಸರ್ಕಾರಗಳು ಹಾಗೂ ಹೈಕೋರ್ಟ್ ಗಳು ಆದೇಶ ಹೊರಡಿಸಿ ಎಂದು ಕೋರಿದರು. ಇದೇ ವೇಳೆ ವಕೀಲ ಜಿ.ಆರ್ ಮೋಹನ್ ಪೀಠಕ್ಕೆ ಮಾಹಿತಿ ನೀಡಿ, ಪಟಾಕಿ ಬಳಕೆ ನಿಷೇಧಿಸಲು ಕೋರಿ ಆಗಷ್ಟ್ 31ರಂದೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇತರೆ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಆದರೆ, ಸರ್ಕಾರ ಸೂಕ್ತ ಕ್ರಮ ಜರುಗಿಸಿಲ್ಲ. ಈಗಾಗಲೇ ಪಟಾಕಿ ಮಾರಾಟಕ್ಕೆ ಸ್ಟಾಲ್ಗಳು ನಿರ್ಮಾಣವಾಗಿವೆ ಎಂದು ವಿವರಿಸಿದರು.