ಬೆಂಗಳೂರು : ಲಾಕ್ಡೌನ್ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ವಿವಾಹ ಸಮಾರಂಭಕ್ಕೆ ಅನುಮತಿ ನೀಡಿದ ರಾಜ್ಯ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಇದೇ ರೀತಿ ಬೇರೆ ಜನರ ಮದುವೆಗೂ ಅನುಮತಿ ನೀಡುತ್ತಿದ್ದಿರಾ ಎಂದು ಪ್ರಶ್ನಿಸಿರುವ ಹೈಕೋರ್ಟ್ ಈ ಕುರಿತು ಕೇಂದ್ರ ಸರ್ಕಾರ ಕೂಡ ಪ್ರತಿಕ್ರಿಯೆ ನೀಡಬೇಕು ಎಂದು ತಾಕೀತು ಮಾಡಿದೆ.
ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು. ಈ ವೇಳೆ, ಸರ್ಕಾರದ ಪರ ವಕೀಲ ವಿಕ್ರಂ ಹುಯಿಲಗೋಳ್ ಅವರು ಲಿಖಿತ ಮಾಹಿತಿ ನೀಡಿ, ರಾಮನಗರ ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ಏ.17ರಂದು ಬೆಳಗ್ಗೆ 8 ರಿಂದ 10 ಗಂಟೆವರೆಗೆ ನಡೆದ ನಿಖಿಲ್ ವಿವಾಹಕ್ಕೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದರು.
ಡಿವೈಎಸ್ಪಿ ಹಂತದ ಅಧಿಕಾರಿಯೊಬ್ಬರು ಬಂದೋಬಸ್ತ್ ಮೇಲ್ವಿಚಾರಣೆ ವಹಿಸಿದ್ದರು. ಮದುವೆ ಸಮಾರಂಭದಲ್ಲಿ ವಧು ಮತ್ತು ವರನ ಕುಟುಂಬಗಳಿಂದ ಅಂದಾಜು 80 - 95 ಜನ ಭಾಗವಹಿಸಿದ್ದರು. ಎಲ್ಲರಿಗೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಗಿತ್ತು. ಮದುವೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ಮಾಂಗಲ್ಯ ಧಾರಣೆ ವೇಳೆ ಮಾತ್ರ ಕುಟುಂಬಸ್ಥರು ಮಾಸ್ಕ್ ಧರಿಸಿಲ್ಲದಿರುವುದು ಕಂಡು ಬಂದಿದೆ ಎಂದು ವಿವರಿಸಿದರು.
ವಿವರಣೆ ಆಲಿಸಿದ ಪೀಠ, ನಿಖಿಲ್ ಮದುವೆಗೆ ಅನುಮತಿ ನೀಡಿದ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿತು. ಪೀಠ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾ, ಲಾಕ್ಡೌನ್ ಅವಧಿಯಲ್ಲಿ ಮದುವೆ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರ ನಿರ್ಬಂಧ ವಿಧಿಸಿತ್ತು. ಇಂತಹ ಸಂದರ್ಭದಲ್ಲಿ ರಾಮನಗರ ಜಿಲ್ಲಾಧಿಕಾರಿ ನಿಖಿಲ್ ಮದುವೆಗೆ ಅನುಮತಿ ನೀಡಬಹುದೇ? 80-90 ಜನರು ಭಾಗವಹಿಸಲು ಅನುಮತಿ ನೀಡಬಹುದಿತ್ತೇ? ಹೀಗೆ ಅನುಮತಿ ನೀಡುವುದಾದರೆ ಉಳಿದ ಜನ ಸಹ ಮದುವೆ ಮಾಡುತ್ತಿದ್ದರಲ್ಲವೇ? ಎಂದು ಪ್ರಶ್ನಿಸಿತು.
ಅಲ್ಲದೆ, ನ್ಯಾಯಾಲಯ ಕಳೆದ ವಿಚಾರಣೆ ವೇಳೆಯಲ್ಲಿ ಮದುವೆಗೆ ಎಷ್ಟು ವಾಹನಗಳಿಗೆ ಪಾಸ್ ನೀಡಲಾಗಿತ್ತು ಎಂಬುದರ ವಿವರಣೆ ಕೇಳಿತ್ತು. ಆದರೆ, ಸರ್ಕಾರ ಈವರೆಗೂ ಮಾಹಿತಿ ನೀಡಿಲ್ಲ. ಈ ಕುರಿತು ಜಿಲ್ಲಾಧಿಕಾರಿ ಮುಂದಿನ ವಿಚಾರಣೆ ವೇಳೆ ತಪ್ಪದೇ ವಿವರಣೆ ನೀಡಬೇಕು. ಜತೆಗೆ ಲಾಕ್ಡೌನ್ ಆದೇಶ ಉಲ್ಲಂಘನೆಯಾಗಿರುವ ಕಾರಣ ಕೇಂದ್ರ ಸರ್ಕಾರ ಈ ಪ್ರಕರಣದಲ್ಲಿ ಯಾವ ಕ್ರಮ ಜರುಗಿಸುತ್ತದೆ ಎಂಬುದನ್ನು ತಿಳಿಸಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತು.