ಬೆಂಗಳೂರು: ಕಳೆದ ಆರು ವರ್ಷಗಳ ಹಿಂದೆ ರಾಯಚೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ದ್ವಿಚಕ್ರ ವಾಹನ ಚಾಲಕನ ಕುಟುಂಬಕ್ಕೆ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ ಆದೇಶಿಸಿದ್ದ 8.8 ಲಕ್ಷ ರೂ. ಪರಿಹಾರವನ್ನು ಹೈಕೋರ್ಟ್ 15.8 ಲಕ್ಷಕ್ಕೆ ಹೆಚ್ಚಳ ಮಾಡಿ ಆದೇಶಿಸಿದೆ. ಅಪಘಾತದಲ್ಲಿ ಮೃತಪಟ್ಟಿದ್ದ 20 ವರ್ಷದ ಹುಲಿರಾಜ್ ಸಹೋದರರು ಮತ್ತು ತಾಯಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ. ನವಾಜ್ ಮತ್ತು ನ್ಯಾಯಮೂರ್ತಿ ರಾಜೇಶ್ ರೈ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ನ್ಯಾಯಾಲಯ ರಾಯಚೂರಿನ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ 8.8 ಲಕ್ಷ ಪರಿಹಾರ ನಿಗದಿ ಮಾಡಿದ್ದನ್ನು ಪರಿಷ್ಕರಿಸಿ ಹೈಕೋರ್ಟ್, 15. 8 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿ ಅದನ್ನು ಸಂತ್ರಸ್ತರ ಕುಟುಂಬಕ್ಕೆ ಪಾವತಿಸುವಂತೆ ಪ್ರಕರಣದ ಪ್ರತಿವಾದಿಯಾಗಿರುವ ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪನಿಗೆ ಸೂಚನೆ ನೀಡಿದೆ.
ಅಲ್ಲದೆ ಪ್ರಕರಣದಲ್ಲಿ ಮಹೇಂದ್ರ ಬೊಲೇರೋ ಜೀಪ್ ಚಾಲಕನ ನಿರ್ಲಕ್ಷ್ಯ ದೃಢಪಟ್ಟಿದ್ದರೂ, ದ್ವಿಚಕ್ರ ವಾಹನ ಸವಾರನ ಬಳಿ ಲೈಸನ್ಸ್ ಇಲ್ಲದೇ ಇರುವ ಅಂಶವನ್ನೂ ಸಹ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ, ಸ್ಥಳ ಪಂಚನಾಮೆ ಮತ್ತು ನಕ್ಷೆಯ ಪ್ರಕಾರ, ಜೀಪ್ ರಸ್ತೆಯ ಮಧ್ಯಭಾಗವನ್ನು ದಾಟಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಆದರೆ ಎಲ್ಲಾ ಅಂಶಗಳನ್ನು ನ್ಯಾಯಮಂಡಳಿ ಸರಿಯಾಗಿ ಪರಿಗಣಿಸಿಲ್ಲ ಎಂದು ಆದೇಶಿಸಿದೆ. ಅಲ್ಲದೆ, ನ್ಯಾಯಮಂಡಳಿ ಮೃತನ ಬಳಿ ವಾಹನ ಚಾಲನ ಪರವಾನಗಿ ಇಲ್ಲವೆಂದ ಮಾತ್ರಕ್ಕೆ ಆತನದ್ದೇ ಸಂಪೂರ್ಣ ನಿರ್ಲಕ್ಷ್ಯ ಎಂದು ಹೇಳಲಾಗದು ಎಂದು ನ್ಯಾಯಪೀಠ ತಿಳಿಸಿದೆ.