ಬೆಂಗಳೂರು: ರಾಜ್ಯದ ಹಾಲಿ-ಮಾಜಿ ಶಾಸಕರು, ಸಂಸದರು ಹಾಗೂ ವಿಧಾನಪರಿಷತ್ ಸದಸ್ಯರ ವಿರುದ್ಧ ದಾಖಲಿಸಿರುವ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ತನಿಖಾ ಸಂಸ್ಥೆ ಹಾಗೂ ಪ್ರಾಸಿಕ್ಯೂಷನ್ ಏಜೆನ್ಸಿಗಳ ವಿವರಗಳನ್ನು ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಜನಪ್ರತಿನಿಧಿಗಳ ವಿರುದ್ಧ ಬಾಕಿಯಿರುವ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಪೀಠ, ಜನ ಪ್ರತಿನಿಧಿಗಳ ವಿರುದ್ಧ ತನಿಖೆ ನಡೆಸುತ್ತಿರುವ ಸಂಸ್ಥೆಗಳನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿಸಬೇಕಿದೆ. ಈ ಹಿನ್ನೆಲೆಯಲ್ಲಿ ಇಡಿ, ಸಿಬಿಐ, ಐಟಿ, ಎಸಿಬಿ ಮತ್ತು ಲೋಕಾಯುಕ್ತ ಸೇರಿದಂತೆ ಜನ ಪ್ರತಿನಿಧಿಗಳ ವಿರುದ್ಧ ತನಿಖೆ ನಡೆಸುತ್ತಿರುವ ಎಲ್ಲ ತನಿಖಾ ಸಂಸ್ಥೆಗಳು ಮತ್ತು ಪ್ರಾಸಿಕ್ಯೂಷನ್ ಏಜೆನ್ಸಿಗಳ ಪಟ್ಟಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತು.
ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಸ್ಥಾಪನೆಗೆ ಹೊರಡಿಸಿರುವ ಆದೇಶದಲ್ಲಿ ಶಾಸಕರು ಹಾಗೂ ಸಂಸದರನ್ನು ಜನ ಪ್ರತಿನಿಧಿಗಳೆಂದು ಉಲ್ಲೇಖಿಸಲಾಗಿದೆ. ವಿಧಾನಪರಿಷತ್ ಸದಸ್ಯರ ಬಗ್ಗೆ ಉಲ್ಲೇಖವಿಲ್ಲ. ಆದ್ದರಿಂದ ವಿಧಾನಪರಿಷತ್ ಸದಸ್ಯರ ವಿರುದ್ಧದ ಪ್ರಕರಣಗಳು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವ್ಯಾಪ್ತಿಗೆ ಬರಲಿದೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಸರ್ಕಾರಕ್ಕೆ ಸೂಚಿಸಿತು.
ಇದೇ ವೇಳೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಎಷ್ಟು ಪ್ರಕರಣಗಳು ಬಾಕಿಯಿವೆ ಮತ್ತು ಅವು ಯಾವ ಯಾವ ಹಂತಗಳಲ್ಲಿವೆ ಎಂಬ ಬಗ್ಗೆ ಜಿಲ್ಲಾವಾರು ವಿವರಗಳ ಜೊತೆಗೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿರುವ ಪ್ರಕರಣಗಳ ಆದೇಶ ಪ್ರತಿ ಹಾಗೂ ಇತರೆ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.