ಬೆಂಗಳೂರು:ಬಿಎಸ್‌ಸಿ ವಿದ್ಯಾರ್ಥಿಯೊಬ್ಬರಿಗೆ ನಿರ್ದಿಷ್ಟ ಪ್ರದೇಶಕ್ಕೆ ಪ್ರವೇಶ ಮಾಡದಂತೆ ಉಪವಿಭಾಗಾಧಿಕಾರಿ ಜಾರಿ ಮಾಡಿದ್ದ ಆದೇಶವನ್ನು ಎರಡು ವಾರ ಜಾರಿ ಮಾಡದಂತೆ ಆದೇಶಿಸಿರುವ ಹೈಕೋರ್ಟ್, ಅರ್ಜಿದಾರರಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದೆ. ಸೇಡಂ ತಾಲೂಕಿನ ಜಮಖಂಡಿಗೆ ನಿರ್ಬಂಧ ಹೇರಿದ್ದ ಉಪ ವಿಭಾಗಾಧಿಕಾರಿಯ ಗಡಿಪಾರು ಆದೇಶ ಮಾಡಿದ್ದ ಕ್ರಮವನ್ನು ಪ್ರಶ್ನಿಸಿ, ಬಾಗಲಕೋಟೆ ಬೀಳಗಿ ತಾಲೂಕಿನ ಹೇಗೂರು ಗ್ರಾಮದ 20 ವರ್ಷದ ಸಿದ್ದು ಎಂಬುವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸಚಿನ್ ಶಂಕರ್ ಮಗದುಮ್ ಅವರಿದ್ದ ಧಾರವಾಡ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಗಡಿಪಾರು ಆದೇಶಕ್ಕೆ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಇದನ್ನೂ ಓದಿ:ವಿಧಾನಸಭಾ ಚುನಾವಣೆ: ತೇರದಾಳ ಮತಕ್ಷೇತ್ರದಲ್ಲಿ ಟಿಕೆಟ್ಗಾಗಿ ಬಿಜೆಪಿಯಲ್ಲಿ ತಿಕ್ಕಾಟ
ಅರ್ಜಿದಾರರು ವಿದ್ಯಾರ್ಥಿಯಾಗಿದ್ದು, ಫೆಬ್ರವರಿ 22ರಿಂದ ಏಪ್ರಿಲ್ 8ರವರೆಗೆ ಪರೀಕ್ಷೆ ನಡೆಯಲಿದೆ. ಆದ್ದರಿಂದ ಅರ್ಜಿದಾರರು ರಕ್ಷಣೆಗೆ ಅರ್ಹವಾಗಿರುವುದರಿಂದ ಉಪವಿಭಾಗಾಧಿಕಾರಿ ಅವರ ಆಕ್ಷೇಪಾರ್ಹ ಆದೇಶಕ್ಕೆ ಎರಡು ವಾರಗಳ ಕಾಲ ತಡೆ ನೀಡಿದ್ದು, ಅವರು ಪರೀಕ್ಷೆ ಬರೆಯಬಹುದಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಅಲ್ಲದೇ, ಪೊಲೀಸ್ ಕಾಯಿದೆಯ ಸೆಕ್ಷನ್ 55 ಅನ್ವಯಿಸುವ ಯಾವುದೇ ತೆರನಾದ ಅಪರಾಧ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ ಎಂದು ಉಪವಿಭಾಗಾಧಿಕಾರಿಗೆ ಮುಚ್ಚಳಿಕೆ ಬರೆದುಕೊಡಬೇಕು ಎಂದು ಅರ್ಜಿದಾರರಿಗೆ ನ್ಯಾಯಾಲಯ ಸೂಚನೆ ನೀಡಿದೆ.
ಇದನ್ನೂ ಓದಿ:ಲೋಕಾಯುಕ್ತ ಕಸ್ಟಡಿ ಅವಧಿ ಅಂತ್ಯ: ಶಾಸಕ ವಿರೂಪಾಕ್ಷಪ್ಪ ಮಾಡಾಳ್ಗೆ ನ್ಯಾಯಾಂಗ ಬಂಧನ