ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯಗಳಿಗೆ ಆರೋಪಿಗಳನ್ನು ಕಡ್ಡಾಯವಾಗಿ ಹಾಜರುಪಡಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಸೆಕ್ಷನ್ 313 ಪ್ರಕಾರ ಆರೋಪಿ ವಿರುದ್ಧದ ಆರೋಪಗಳನ್ನು ವಿಚಾರಣೆಗೆ ನಿಗದಿಪಡಿಸುವ ಸಂದರ್ಭದಲ್ಲಿ ಆತ ಕೋರ್ಟ್ ನಲ್ಲಿ ಖುದ್ದಾಗಿ ಹಾಜರಿರಬೇಕಾಗುತ್ತದೆ. ಈ ನಿಯಮವನ್ನು ಹೈಕೋರ್ಟ್ ತಾತ್ಕಾಲಿಕವಾಗಿ ಸಡಿಲಿಸಿದ್ದು, ಆರೋಪಿಯ ಖುದ್ದು ಹಾಜರಿ ಅಗತ್ಯವಿಲ್ಲ ಎಂದು ಸೂಚಿಸಿದೆ. ನೇರವಾಗಿ ಹಾಜರಾಗುವ ಬದಲಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗೆ ಮಾಹಿತಿ ನೀಡಿ, ವಿಚಾರಣೆ ನಡೆಸಿ ಆರೋಪಗಳನ್ನು ನಿಗದಿಪಡಿಸಲು ವಿಚಾರಣಾ ನ್ಯಾಯಾಲಯಗಳಿಗೆ ಆದೇಶಿಸಿದೆ.
ಓದಿ:ದೇವಸ್ಥಾನ-ಮಾಲ್ಗಳಿಗೆ ಪ್ರವೇಶ: ಸಡಿಲಿಕೆ ಪರಿಷ್ಕರಿಸಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆ
ಒಂದೊಮ್ಮೆ ಆರೋಪಿಯು ಕಾರಾಗೃಹದಲ್ಲಿ ಇದ್ದರೆ ಜೈಲು ಅಧೀಕ್ಷಕರ ಸಮ್ಮುಖದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಬಹುದು. ಅಥವಾ ವಕೀಲರ ಮೂಲಕ ಆರೋಪಿಗೆ ಕೋರ್ಟ್ ಲಿಖಿತ ಪ್ರಶ್ನೆಗಳನ್ನು ಕಳುಹಿಸಿ ಅದಕ್ಕೆ ಆತನ ಉತ್ತರಗಳನ್ನು ಪಡೆದು ಬಳಿಕ ಸಹಿ ತೆಗೆದುಕೊಂಡು ಆರೋಪ ನಿಗದಿಪಡಿಸಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಕೋರ್ಟ್ಗಳ ಸುಗಮ ಮತ್ತು ಸುರಕ್ಷಿತ ಕಲಾಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ, ವಿಚಾರಣಾ ನ್ಯಾಯಾಲಯಗಳಿಗೆ ಈ ನಿರ್ದೇಶನ ನೀಡಿದೆ.