ಕರ್ನಾಟಕ

karnataka

ETV Bharat / state

ನ್ಯಾಯಾಲಯದ ಆದೇಶ ಪಾಲಿಸದ ಸರ್ಕಾರ; 5 ಲಕ್ಷ ಠೇವಣಿ ಇಡುವಂತೆ ಹೈಕೋರ್ಟ್ ಆದೇಶ

ಹೈಕೋರ್ಟ್ ಆದೇಶಗಳನ್ನು ಪಾಲಿಸದ ಹಿನ್ನೆಲೆ ಸರ್ಕಾರಕ್ಕೆ 5 ಲಕ್ಷ ರೂ.ಗಳ ಠೇವಣಿ ಇಡುವಂತೆ ಹೈಕೋರ್ಟ್ ಆದೇಶಿಸಿದೆ.

the-high-court-fined-5-lakhs-to-the-government-for-disobeying-the-court-order
ನ್ಯಾಯಾಲಯದ ಆದೇಶ ಪಾಲಿಸದ ಸರ್ಕಾರಕ್ಕೆ 5 ಲಕ್ಷ ದಂಡ ವಿಧಿಸಿದ ಹೈಕೋರ್ಟ್

By ETV Bharat Karnataka Team

Published : Jan 16, 2024, 6:55 PM IST

Updated : Jan 16, 2024, 10:45 PM IST

ಬೆಂಗಳೂರು: ನ್ಯಾಯಾಲಯದ ಎಲ್ಲ ಆದೇಶಗಳನ್ನು ಪಾಲಿಸಬೇಕಾಗಿದ್ದು, ನ್ಯಾಯಾಂಗ ನಿಂದನೆ ಎನ್ನುವುದೇ ತಾರ್ಕಿಕವಲ್ಲದ್ದಾಗಿದೆ. ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸುವುದು ಆದೇಶಗಳನ್ನು ಪಾಲಿಸುವುದಾಗಿದೆ. ಆದರೂ ಆದೇಶಗಳನ್ನು ಪಾಲಿಸದೇ ಅಧಿಕಾರಿಗಳು ತಮಾಷೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್ ಸರ್ಕಾರಕ್ಕೆ 5 ಲಕ್ಷ ರೂ.ಗಳ ಠೇವಣಿ ಇಡುವಂತೆ ಆದೇಶಿಸಿದೆ. ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ವೇತನ ತಾರತಮ್ಯ ಸರಿಪಡಿಸುವ ಸಂಬಂಧ ದಾಖಲಾಗಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

ಸರ್ಕಾರದ ಆದೇಶ ಪಾಲನೆ ಮಾಡದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ತಪ್ಪೆಸಗಿದ ಆರು ಜನ ಅಧಿಕಾರಿಗಳಿಗೆ ದಂಡಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದೆ. ರಾಜ್ಯ ಸರ್ಕಾರವು 5 ಲಕ್ಷ ರೂಪಾಯಿಯನ್ನು ಎರಡು ವಾರಗಳಲ್ಲಿ ಠೇವಣಿ ಇಡುವುದಕ್ಕೆ ಒಳಪಟ್ಟು ಮೂರು ವಾರಗಳ ಕಾಲಾವಕಾಶ ನೀಡುತ್ತಿದೆ. ದಂಡದ ಹಣವನ್ನು ಸರ್ಕಾರದಲ್ಲಿ ಪ್ರಮುಖ ಸ್ಥಾನದಲ್ಲಿರುವ ಆರು ಪ್ರತಿವಾದಿಗಳಲ್ಲಿ ತಪ್ಪಿತಸ್ಥರನ್ನು ಹೊಣೆಗಾರರನ್ನಾಗಿಸಿ ವಸೂಲು ಮಾಡಬಹುದಾಗಿದೆ. ಆದೇಶ ಈ ಪ್ರತಿಯನ್ನು ಮುಖ್ಯ ಕಾರ್ಯದರ್ಶಿಗೆ ಕಳುಹಿಸಿಕೊಡಬೇಕು ಎಂದು ನ್ಯಾಯಾಲಯ ಆದೇಶ ಮಾಡಿದೆ.

ವಿಚಾರಣೆ ವೇಳೆ ಕಾಲಾವಕಾಶ ಕೋರಿದ ಸರ್ಕಾರಿ ವಕೀಲರ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ಪ್ರತಿಯೊಂದು ಪ್ರಕರಣದಲ್ಲಿಯೂ ಸರ್ಕಾರ ಹೈಕೋರ್ಟ್ ಆದೇಶ ಪಾಲನೆ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಮೂರೂವರೆ ವರ್ಷಗಳಾದರೂ ಒಂದು ಹೈಕೋರ್ಟ್ ಆದೇಶ ಪಾಲನೆ ಮಾಡಲು ಆಗುತ್ತಿಲ್ಲ ಎಂದರೆ ಏನರ್ಥ? ಸರ್ಕಾರದಲ್ಲಿ ಯಾವ ತಮಾಷೆ ಜರುಗುತ್ತಿದೆ? ಎಂದು ಪ್ರಶ್ನಿಸಿದರು.

ಅಲ್ಲದೇ, ಕೋರ್ಟ್‌ಗಳ ಬಗ್ಗೆ ಸಾಮಾನ್ಯ ಜನರು ಏನು ಮಾತನಾಡುತ್ತಾರೆ ಎಂಬುದನ್ನು ನೀವು ಯಾವತ್ತಾದರೂ ಕಿವಿಗೊಟ್ಟು ಕೇಳಿದ್ದೀರಾ?, ಕೇಳಿಲ್ಲ ಎಂದಾದರೆ ಹೋಗಿ ಪಾರ್ಕ್‌ಗಳಲ್ಲಿ ಕೂತು ಕೇಳಿಸಿಕೊಂಡು ಬನ್ನಿ. ಆಗ ನಿಮಗೆ ಗೊತ್ತಾಗುತ್ತದೆ. ಕೋರ್ಟ್ ಇರುವುದು ಜನರ ಹಕ್ಕುಗಳನ್ನು ಎತ್ತಿ ಹಿಡಿಯಲು ಮತ್ತು ಅವರಿಗೆ ಪರಿಹಾರ ಕೊಡಲು. ಅವರೇನೂ ಸುಖಾಸುಮ್ಮನೆ ಕೋರ್ಟ್ ಮೆಟ್ಟಿಲೇರುವುದಿಲ್ಲ. ಅಂತಹುದರಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಪೀಠ ನೀಡಿದ ಆದೇಶ ಪಾಲನೆ ಮಾಡಲು ನಿಮಗೆ ಆಗುತ್ತಿಲ್ಲ ಎಂದರೆ ಜನ ಯಾವ ರೀತಿ ನಮ್ಮನ್ನು ಗೌರವಿಸುತ್ತಾರೆ ಎಂಬುದರ ಕಿಂಚಿತ್ತೂ ಅರಿವಾದರೂ ನಿಮಗೆ ಇದೆಯಾ? ಎಂದು ತರಾಟೆಗೆ ತೆಗೆದುಕೊಂಡರು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಆದೇಶ ಪಾಲನೆ ಮಾಡಲು ಇನ್ನೂ ಎರಡು ವಾರಗಳ ಸಮಯಾವಕಾಶ ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದನ್ನು ತಿರಸ್ಕರಿಸಿದ ಪೀಠ ಈ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ ಏನು?:ಕೋನೇನ ಅಗ್ರಹಾರದ ಅನುದಾನಿತ ಸರ್ ಎಂ ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ನಿವೃತ್ತಿ ಹೊಂದಿರುವ ಗ್ರಂಥಪಾಲಕಿ ವಿ.ಎ.ನಾಗಮ್ಮ ತಮಗೆ ಗ್ರಂಥಪಾಲಕರ ದರ್ಜೆಯ ವೇತನ‌ ಮಂಜೂರು ಮಾಡಲು ಕೋರಿದ್ದರು. ರಾಜ್ಯದಲ್ಲಿನ ದ್ವಿತೀಯ ದರ್ಜೆ ಸಹಾಯಕರಾಗಿದ್ದ 250ಕ್ಕೂ ಹೆಚ್ಚು ನೌಕರರು ಗ್ರಂಥಪಾಲಕರ ಹುದ್ದೆಯ ವೇತನ ಶ್ರೇಣಿ ಹೊಂದಿದ್ದು, ನನಗೂ ಇದೇ ವೇತನ ಶ್ರೇಣಿ ಅನ್ವಯಿಸಬೇಕು ಎಂದು ಕೋರಿದ್ದರು.

ಈ ಅರ್ಜಿ ಮಾನ್ಯ ಮಾಡಿದ್ದ ಏಕ ಸದಸ್ಯ ಪೀಠ ಅರ್ಜಿದಾರರಾದ ವಿ.ಎ‌.ನಾಗಮಣಿ ಅವರ ವೇತನ ತಾರತಮ್ಯ ಸರಿಪಡಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಆದರೆ, ಈ ಆದೇಶ ಪಾಲನೆ ಮಾಡಿಲ್ಲ ಎಂದು ಆರೋಪಿಸಿ ನಾಗಮಣಿ ಸಿವಿಲ್ ನ್ಯಾಯಾಂಗ ‌ನಿಂದನೆ ಅರ್ಜಿ ಸಲ್ಲಿಸಿದರು.

ಇದನ್ನೂ ಓದಿ:ಪರಿಶಿಷ್ಟ ಜಾತಿ, ಪಂಗಡ ಹಾಸ್ಟೆಲ್ ಸಿಬ್ಬಂದಿ ಭರ್ತಿ ಕುರಿತು ಸಮಗ್ರ ವರದಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆಯಪೀಠ ದಂಡ ವಿಧಿಸಿದೆ.

Last Updated : Jan 16, 2024, 10:45 PM IST

ABOUT THE AUTHOR

...view details