ಕರ್ನಾಟಕ

karnataka

ಶಿರಾ ಉಪಚುನಾವಣೆ : ಪರಾಜಿತ ಅಭ್ಯರ್ಥಿ ಟಿ ಬಿ ಜಯಚಂದ್ರ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

By

Published : Jul 17, 2021, 7:33 PM IST

ಅರ್ಜಿದಾರರೂ ಕಾಲಮಿತಿಯಲ್ಲಿ ಅರ್ಜಿ ಸರಿಪಡಿಸಿರಲಿಲ್ಲ. ಬದಲಿಗೆ 2021ರ ಜನವರಿ 2ರಂದು ಅರ್ಜಿದಾರರು ಅರ್ಜಿ ಸರಿಪಡಿಸಲು ಅವಕಾಶ ನೀಡುವಂತೆ ಮನವಿ ಮಾಡಿ ಮೆಮೋ ಸಲ್ಲಿಸಿದ್ದರು. ಆದರೆ, ಚುನಾವಣಾ ಅರ್ಜಿಗಳನ್ನು ವಿಶೇಷವಾಗಿ ಪರಿಗಣಿಸುವುದರಿಂದ ಮೆಮೋ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ ಅರ್ಜಿ ವಜಾ ಮಾಡಿ ಆದೇಶಿಸಿದೆ..

ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಶಿರಾ ಉಪಚುನಾವಣೆಯಲ್ಲಿ ಗೆಲುವು ಪಡೆದಿರುವ ಬಿಜೆಪಿಯ ಡಾ. ಸಿ ಎಂ ರಾಜೇಶ್ ಗೌಡ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ತಮ್ಮನ್ನು ಶಾಸಕರಾಗಿ ಘೋಷಿಸಬೇಕು ಎಂದು ಕೋರಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಟಿ ಬಿ ಜಯಚಂದ್ರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.

ಅರ್ಜಿದಾರ ಟಿ ಬಿ ಜಯಚಂದ್ರ ಅವರು ಜನಪ್ರತಿನಿಧಿಗಳ ಕಾಯ್ದೆ-1951ರ ಸೆಕ್ಷನ್ (82)ರ ಪ್ರಕಾರ ತಮ್ಮ ಅರ್ಜಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳನ್ನೂ ಪ್ರತಿವಾದಿಗಳಾಗಿ ಸೇರಿಸಬೇಕಿತ್ತು. ಆದರೆ, ಅರ್ಜಿಯಲ್ಲಿ ವಿಜೇತ ಅಭ್ಯರ್ಥಿ ಸಿ.ಎಂ ರಾಜೇಶ್ ಗೌಡ ಹಾಗೂ ಜಿಲ್ಲಾ ಚುನಾವಣಾಧಿಕಾರಿಯನ್ನಷ್ಟೇ ಪ್ರತಿವಾದಿಗಳಾಗಿ ಸೇರಿಸಿದ್ದಾರೆ.

ಹೈಕೋರ್ಟ್ ಕಚೇರಿ ಅರ್ಜಿಯಲ್ಲಿ 19 ಆಕ್ಷೇಪಣೆಗಳನ್ನು ಎತ್ತಿದ್ದರೂ ಅವಶ್ಯ ಪಕ್ಷಗಾರರ ಕುರಿತು ತಿಳಿಸಿಲ್ಲ. ಇನ್ನು, ಅರ್ಜಿದಾರರು ಕಾಲಮಿತಿಯಲ್ಲಿ ಪ್ರತಿವಾದಿಗಳನ್ನು ಸೇರಿಸಿಲ್ಲ. ಹೀಗಾಗಿ, ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾ ಮಾಡಿದೆ.

ಪ್ರಕರಣದ ಹಿನ್ನೆಲೆ : ಕಳೆದ ವರ್ಷ ನಡೆದ ಶಿರಾ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಟಿ.ಬಿ ಜಯಚಂದ್ರ ಅವರು ಬಿಜೆಪಿಯ ಡಾ. ಸಿ.ಎಂ ರಾಜೇಶ್ ಗೌಡರ ವಿರುದ್ಧ ಸ್ಪರ್ಧಿಸಿ ಪರಾಜಿತಗೊಂಡಿದ್ದರು. ಆ ಬಳಿಕ 2020ರ ಡಿಸೆಂಬರ್ 18ರಂದು ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದ ಜಯಚಂದ್ರ, ವಿಜೇತ ಅಭ್ಯರ್ಥಿ ರಾಜೇಶ್ ಗೌಡ ಚುನಾವಣಾ ಅಕ್ರಮಗಳನ್ನು ಎಸಗಿದ್ದಾರೆ.

ಹೀಗಾಗಿ, ಅವರ ಆಯ್ಕೆಯನ್ನು ಜನಪ್ರತಿನಿಧಿಗಳ ಕಾಯ್ದೆ-1951ರ ಸೆಕ್ಷನ್‌ 100 (ಬಿ)(ಡಿ) ಪ್ರಕಾರ ಅಸಿಂಧುಗೊಳಿಸಬೇಕು. ಹಾಗೆಯೇ, ಸೆಕ್ಷನ್ 84 ಮತ್ತು 101(ಎ) ಪ್ರಕಾರ ತಮ್ಮನ್ನು ವಿಜೇತರೆಂದು ಘೋಷಿಸಬೇಕು ಎಂದು ಕೋರಿದ್ದರು. ಅರ್ಜಿಯಲ್ಲಿ ಸೆಕ್ಷನ್ 82(ಎ) ಪ್ರಕಾರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳನ್ನು ಪ್ರತಿವಾದಿಯಾಗಿ ಸೇರಿಸಬೇಕಿತ್ತು. ಆದರೆ, ಅರ್ಜಿಯಲ್ಲಿ ರಾಜೇಶ್ ಗೌಡ ಹಾಗೂ ಜಿಲ್ಲಾ ಚುನಾವಣಾಧಿಕಾರಿಯನ್ನಷ್ಟೇ ಪ್ರತಿವಾದಿಯಾಗಿ ಮಾಡಲಾಗಿತ್ತು. ಈ ಹಿನ್ನೆಲೆ ಹೈಕೋರ್ಟ್ ರಿಜಿಸ್ಟ್ರಿ ಕಚೇರಿ ಅರ್ಜಿಯಲ್ಲಿ 19 ಆಕ್ಷೇಪಣೆಗಳನ್ನು ಎತ್ತಿದ್ದರೂ ಎಲ್ಲ ಪಕ್ಷಗಾರರನ್ನು ಸೇರಿಸಬೇಕೆಂಬ ವಿಚಾರ ಎತ್ತಿರಲಿಲ್ಲ.

ಅರ್ಜಿದಾರರೂ ಕಾಲಮಿತಿಯಲ್ಲಿ ಅರ್ಜಿ ಸರಿಪಡಿಸಿರಲಿಲ್ಲ. ಬದಲಿಗೆ 2021ರ ಜನವರಿ 2ರಂದು ಅರ್ಜಿದಾರರು ಅರ್ಜಿ ಸರಿಪಡಿಸಲು ಅವಕಾಶ ನೀಡುವಂತೆ ಮನವಿ ಮಾಡಿ ಮೆಮೋ ಸಲ್ಲಿಸಿದ್ದರು. ಆದರೆ, ಚುನಾವಣಾ ಅರ್ಜಿಗಳನ್ನು ವಿಶೇಷವಾಗಿ ಪರಿಗಣಿಸುವುದರಿಂದ ಮೆಮೋ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ ಅರ್ಜಿ ವಜಾ ಮಾಡಿ ಆದೇಶಿಸಿದೆ.

ಇದನ್ನೂ ಓದಿ : ತಾಕತ್ತಿದ್ದರೆ ನನ್ನ Voice Record ಬಿಡುಗಡೆ ಮಾಡ್ಲಿ; ಇಂದ್ರಜಿತ್ ಲಂಕೇಶ್​​​ಗೆ ದರ್ಶನ್ ಸವಾಲು!

ABOUT THE AUTHOR

...view details