ಬೆಂಗಳೂರು : ವಸತಿ ಪ್ರದೇಶದ ಜಾಗವನ್ನು ಪಾರ್ಥನಾ ಸಭಾಂಗಣವಾಗಿ ಬಳಕೆ ಮಾಡುವುದನ್ನು ಪ್ರಶ್ನಿಸಿ ಬೆಂಗಳೂರು ನಗರದ ಎಚ್‌ಬಿಆರ್ ಬಡಾವಣೆಯ ನೂರಾರು ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸ್ಯಾಮ್ ಪಿ ಫಿಲಿಪ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜೆಎಸ್ ಕಮಲ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಅರ್ಜಿಯನ್ನು ಕೆಲವು ಊಹೆ ಹಾಗೂ ತಪ್ಪು ಕಲ್ಪನೆಗಳಿಂದಾಗಿ ಸಲ್ಲಿಸಲಾಗಿದೆ. ಹಾಗಾಗಿ ಇದನ್ನು ಪುರಸ್ಕರಿಸಲಾಗದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಾರ್ಥನೆಯನ್ನು ಸಲ್ಲಿಸುವುದರಿಂದ ಅಪಾಯವಿದೆ ಎಂದರು. ಅದಕ್ಕೆ ತೀವ್ರ ಆಕ್ಷೇಪ ಎತ್ತಿದ ನ್ಯಾಯಪೀಠ, ಪ್ರಾರ್ಥನೆ ಸಲ್ಲಿಸುವುದು ಹೇಗೆ ಬೆದರಿಕೆ ಆಗುತ್ತದೆ ಎಂದು ಪ್ರಶ್ನಿಸಿತು. ಅಲ್ಲದೆ, ನಾವು ನಿಮ್ಮ ವಾದವನ್ನು ಒಪ್ಪುವುದಿಲ್ಲ ಎಂದು ನ್ಯಾಯ ಪೀಠ ಹೇಳಿತು. ಪ್ರಾರ್ಥನೆ ಸಲ್ಲಿಸುವುದು ಹೇಗೆ ಬೆದರಿಕೆ ಆಗುತ್ತದೆ ಹೇಳಿ?.. ನೀವು ಕೋರ್ಟ್ ಮುಂದೆ ವಾದ ಮಂಡಿಸುವಾಗ ಬಹಳ ಜಾಗರೂಕತೆಯಿಂದ ಇರಬೇಕು. ಈ ರೀತಿ ಹೇಳಿಕೆ ನೀಡುವುದನ್ನು ಸಹಿಸಲಾಗದು. ನೀವು ಈ ಬಗ್ಗೆ ಸಹಜವಾಗಿ ಮಾತನಾಡಬಾರದು. ವಕೀಲರಾಗಿ ನೀವು ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಗಾಳಿಯಲ್ಲಿ ತೂರಿ ಹೋಗುವಂತಹ ಹೇಳಿಕೆಗಳನ್ನು ನೀಡುವ ಹಕ್ಕಿಲ್ಲ ಎಂದೂ ನ್ಯಾಯಾಲಯ ಪೀಠ ತಿಳಿಸಿದೆ.