ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ 1999ರ (ಫೆಮಾ) ಸೆಕ್ಷನ್ 37(ಎ) ರ ಸಿಂಧುತ್ವವನ್ನು ಎತ್ತಿ ಹಿಡಿದಿರುವ ಹೈಕೋರ್ಟ್, ಈ ಸಂಬಂಧ ಶಿಯೋಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಶಿಯೋಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಫೆಮಾ ಕಾಯಿದೆ 37ಎ ಯಾವುದೇ ರೀತಿಯಲ್ಲಿಯೂ ನಿರಂಕುಶತೆ ಹೊಂದಿಲ್ಲ. ಹೀಗಾಗಿ ಅರ್ಜಿದಾರರು ಪ್ರಶ್ನಿಸಿರುವ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಪೀಠ ತಿಳಿಸಿದೆ.
ಅಲ್ಲದೆ, ಅರ್ಜಿದಾರರ ಪರ ವಕೀಲರು ವಾದ ಮತ್ತು ಅವರು ಉಲ್ಲೇಖಿಸಿರುವ ವಿವಿಧ ನ್ಯಾಯಾಲಯಗಳ ತೀರ್ಪುಗಳ ಪ್ರಕಾರ ಫೆಮಾ ಕಾಯಿದೆ ಸೆಕ್ಷನ್ 37ಎ ಯಾವುದೇ ರೀತಿಯಲ್ಲಿಯೂ ನಿಯಮಗಳಗೆ ವಿರುದ್ಧವಾಗಿಲ್ಲ. ಜೊತೆಗೆ, ಸಂವಿಧಾನದ ಯಾವುದೇ ವಿಧಿಗೆ ವಿರುದ್ಧವಾಗಿಲ್ಲ ಎಂದು ಪೀಠ ತಿಳಿಸಿದೆ.
ಆದರೂ, ಶಿಯೋಮಿ ಸಂಸ್ಥೆ ಸೆಕ್ಷನ್ 37ಎ(5)ರ ಅಡಿಯಲ್ಲಿ ಮೇಲ್ಮನವಿ ಸಕ್ಷಮ ಪ್ರಾಧಿಕಾರದ ಮುಂದೆ ಮನವಿ ಸಲ್ಲಿಸಲು ಸ್ವಾತಂತ್ರ್ಯವಾಗಿದೆ. ಈ ಅರ್ಜಿ ವಜಾಗೊಂಡಿರುವ ಅಂಶ ಮೇಲ್ಮನವಿ ಸಕ್ಷಮ ಪ್ರಾಧಿಕಾರದ ಮುಂದೆ ಮನವಿ ಸಲ್ಲಿಸುವುದಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಸ್ಪಷ್ಟ ಪಡಿಸಿದೆ. ಶಿಯೋಮಿ ಸಂಸ್ಥೆಗೆ ಸೇರಿದ್ದ 5,551 ಕೋಟಿ ರೂ.ಗಳನ್ನು ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದ್ದ ಕ್ರಮವನ್ನು ಹೈಕೋರ್ಟ್ ಇತ್ತೀಚೆಗೆ ಎತ್ತಿ ಹಿಡಿದಿತ್ತು ಎಂಬುದನ್ನು ಇಲ್ಲಿ ಸ್ಮರಿಸ ಬಹುದಾಗಿದೆ.
ಪ್ರಕರಣದ ಹಿನ್ನೆಲೆ: 2022ರ ಏಪ್ರಿಲ್ 29 ರಂದು ಶಿಯೋಮಿ ಕಂಪೆನಿಗೆ ಸೇರಿದ್ದ 5,551 ರೂ.ಗಳನ್ನು ಜಾರಿ ನಿರ್ದೇಶನಾಲಯ ಫೆಮಾ ಕಾಯಿದೆಯ ಸೆಕ್ಷನ್ 37ಎ ಅಡಿಯಲ್ಲಿ ವಶಪಡಿಸಿಕೊಂಡಿತ್ತು. ಅಲ್ಲದೆ, ಅರ್ಜಿದಾರ ಕಂಪೆನಿಯು ಭಾರತದಿಂದ ಹೊರ ಭಾಗದಲ್ಲಿರುವ ವಿದೇಶಿ ಕಂಪೆನಿಯಾದ ಕ್ವಾಲ್ಕಾಮ್‌ಗೆ ರಾಯಧನದ ರೂಪದಲ್ಲಿ ಪಾವತಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಹಣವನ್ನು ವಶಪಡಿಸಿಕೊಳ್ಳುತ್ತಿರುವುದಾಗಿ ಜಾರಿ ನಿರ್ದೇಶನಾಲಯ ಕಂಪೆನಿಗೆ ತಿಳಿಸಿತ್ತು.