ಬೆಂಗಳೂರು:ಶಿವಾಜಿ ನಗರ ಮತ್ತು ಶಾಂತಿ ನಗರ ವಿಧಾನಸಭಾ ಕ್ಷೇತ್ರಗಳಿಂದ ಸ್ಥಳಾಂತರಗೊಂಡಿರುವ ಹಾಗೂ ಮರಣ ಹೊಂದಿರುವ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಕೋರಿ ಸಲ್ಲಿಸಿರುವ ಅರ್ಜಿಯ ಸಂಬಂಧ 12 ದಿನಗಳಲ್ಲಿ ಕಾಯ್ದೆ ಮತ್ತು ನಿಯಮಗಳ ಅನುಸಾರ ಸೂಕ್ತ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಶಿವಾಜಿ ನಗರದ ಬಿಜೆಪಿಯ ಬೂತ್ ಮಟ್ಟದ ಅಧಿಕಾರಿ ಎಂ.ಜಿ. ಪ್ರದೀಪ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸೂಚನೆ ನೀಡಿ ಆದೇಶಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ವಿವೇಕ್ ರೆಡ್ಡಿ: ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿವೇಕ್ ರೆಡ್ಡಿ ಅವರು, ಶಿವಾಜಿ ನಗರ ವಿಧಾನಸಭಾ ಕ್ಷೇತ್ರ ಒಂದರಲ್ಲಿ ಸುಮಾರು 26 ಸಾವಿರಕ್ಕೂ ಹೆಚ್ಚು ಮತದಾರರು ಸ್ಥಳಾಂತರಗೊಂಡಿರುವ ಹಾಗೂ ಮರಣ ಹೊಂದಿದ್ದಾರೆ. ಅವರ ಹೆಸರು ಮತದಾರರ ಪಟ್ಟಿಯಲ್ಲಿವೆ. ಅಂತೆಯೇ, ಶಾಂತಿ ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 8 ಸಾವಿರದಷ್ಟು ಇಂತಹ ಮತದಾರರ ಹೆಸರುಗಳಿವೆ. ಈ ಕುರಿತ ಮನವಿಗಳನ್ನು ಪರಿಗಣಿಸಿ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸದ್ಯದಲ್ಲೇ ನಡೆಯಲಿದ್ದು, ಈ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ನಿರ್ದೇಶನ ನೀಡಬೇಕು ಎಂದು ನ್ಯಾಯಪೀಠಕ್ಕೆ ಕೋರಿದರು.
ಪ್ರತಿವಾದ ಮಂಡಿಸಿದ ವಕೀಲ ಶಶಿಕಿರಣ ಶೆಟ್ಟಿ:ಪ್ರತಿವಾದಿ ರಿಜ್ವಾನ್ ಅರ್ಷದ್ ಪರ ಹಾಜರಿದ್ದ ಹಿರಿಯ ವಕೀಲ ಶಶಿಕಿರಣ ಶೆಟ್ಟಿ ಅವರು, 2023ರ ಜನವರಿ 15ರಂದು ಮತದಾರರ ಪಟ್ಟಿಯನ್ನು ಪುನರ್ ಪರಿಶೀಲನೆ ಮಾಡಲಾಗಿದೆ. ನಿಯಮಗಳು ಮತ್ತು ಕಾಯ್ದೆಯ ಅನುಸಾರ ಆರು ತಿಂಗಳಿಗೂ ಮುನ್ನ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಬರುವುದಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಚುನಾವಣಾ ಆಯೋಗದ ಮಾರ್ಗದರ್ಶಿ ಸೂತ್ರ ನಿಯಮಗಳು ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆಯ ಅನುಸಾರ ಸೂಕ್ತ ಪರಿಶೀಲನೆ ನಡೆಸಿ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಿಸಿ. ಈ ಕುರಿತ ನಿರ್ಧಾರವನ್ನು ಇದೇ 26 ರಂದು ಅಥವಾ ಅದಕ್ಕೂ ಮೊದಲು ತೆಗೆದುಕೊಳ್ಳಿ ಎಂದು ಆದೇಶಿಸಿ ಅರ್ಜಿಯನ್ನು ಇತ್ಯರ್ಥ್ಯಪಡಿಸಿತು.