ಕರ್ನಾಟಕ

karnataka

ETV Bharat / state

ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಕುರಿತ ಅರ್ಜಿ: ಸ್ವಯಂ ಪ್ರೇರಿತ ಹಿತಾಸಕ್ತಿ ಅರ್ಜಿಯಾಗಿ ಪರಿವರ್ತಿಸಿದ ಹೈಕೋರ್ಟ್​ - ತ್ಯಾಜ್ಯ ವಿಲೇವಾರಿ ಘಟಕ

ಕೊಡಗು ಜಿಲ್ಲೆಯ ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಕುರಿತ ಅರ್ಜಿಯನ್ನು ಹೈಕೋರ್ಟ್​, ಸ್ವಯಂಪ್ರೇರಿತ ಹಿತಾಸಕ್ತಿ ಅರ್ಜಿಯಾಗಿ ಪರಿವರ್ತಿಸಿದೆ.

ಹೈಕೋರ್ಟ್
ಹೈಕೋರ್ಟ್

By

Published : Nov 9, 2022, 2:53 PM IST

ಬೆಂಗಳೂರು: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಶ್ರೀರಂಗಪಟ್ಟಣದ ಜನವಸತಿ ಪ್ರದೇಶ ಸಮೀಪ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುತ್ತಿರುವ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಇದನ್ನು ಹೈಕೋರ್ಟ್ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿವರ್ತನೆ ಮಾಡಿದೆ.

ಘಟಕ ನಿರ್ಮಾಣವನ್ನು ಪ್ರಶ್ನಿಸಿ ಕಾನೂನು ವಿದ್ಯಾರ್ಥಿ ಎಂ.ಎ. ತಿಮ್ಮಯ್ಯ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ನಾಗರಿಕರಾಗಿರುವ ಸುಬ್ಬಯ್ಯ ಎಂಬುವರು ತಕರಾರು ಅರ್ಜಿ ಸಲ್ಲಿಸಿದ್ದರು. ಸುಬ್ಬಯ್ಯ ಎಂಬುವರಿಂದ ಪ್ರಕರಣ ಸಂಬಂಧ ಹಲವು ದಾಖಲೆಗಳನ್ನು ಪಡೆದು ತಿಮ್ಮಯ್ಯ ಈ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯ ಮೂರ್ತಿ ಪಿ.ಬಿ. ವರಾಲೆ ಅವರಿದ್ದ ವಿಭಾಗೀಯ ಪೀಠ, ಈ ಅಂಶವನ್ನು ಗಮನಿಸಿತು.

ಇದನ್ನೂ ಓದಿ:ವಿಶ್ವೇಶ್ವರಯ್ಯ ವಿವಿ ಕುಲಪತಿ ನೇಮಕ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿ ಡಿಸೆಂಬರ್​ 2ಕ್ಕೆ ವಿಚಾರಣೆ

ಬಳಿಕ ಅರ್ಜಿಯನ್ನು ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿವರ್ತಿಸಿಕೊಂಡು ವಿಚಾರಣೆ ನಡೆಸುವುದಾಗಿ ತಿಳಿಸಿತು. ಅಲ್ಲದೇ ಅರ್ಜಿಗೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಕಾನೂನು ಸೇವಾ ಪ್ರಾಧಿಕಾರದ ವಕೀಲರಾದ ವಿದ್ಯುಲ್ಲತ ಅವರಿಗೆ ಹಸ್ತಾಂತರ ಮಾಡಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿತು.

ವಿಚಾರಣೆ ಮುಂದೂಡಿಕೆ:ತ್ಯಾಜ್ಯ ಘಟಕ ನಿರ್ಮಾಣ ಕಾರ್ಯಕ್ಕೆ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ಮುಂದಿನ ವಿಚಾರಣೆವರೆಗೂ ವಿಸ್ತರಿಸುತ್ತಿರುವುದಾಗಿ ನ್ಯಾಯಪೀಠ ಆದೇಶಿಸಿತು. ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಕೊಡಗು ಜಿಲ್ಲಾಧಿಕಾರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಮತ್ತು ಕರ್ನಾಟಕ ರಾಜ್ಯ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರಕ್ಕೆ ನೋಟಿಸ್ ನೀಡಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ ಏನು?: ವಿರಾಜಪೇಟೆ ತಾಲೂಕಿನ ಶ್ರೀರಂಗಪಟ್ಟಣ ಗ್ರಾಮದ ಸರ್ವೇ ನಂಬರ್ 28/2ರರಲ್ಲಿ ಅರ್ಧ ಎಕರೆ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿತ್ತು. ಸಿದ್ಧಾಪುರ ಮತ್ತು ಮಲ್ದಾರೆ ಗ್ರಾಮ ಪಂಚಾಯಿತಿಗಳು ಜಂಟಿಯಾಗಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುತ್ತಿವೆ.

ಅವೈಜ್ಞಾನಿಕವಾಗಿ ನಿರ್ಮಾಣವಾಗುತ್ತಿರುವ ಈ ಘಟಕದ 50 ಮೀಟರ್ ಸಮೀಪವೇ ಕಾವೇರಿ ನದಿಯ ಉಪನದಿಗಳು ಹರಿಯುತ್ತವೆ. ಜನ ವಸತಿ ಪ್ರದೇಶವಿದ್ದು, ಸರ್ಕಾರಿ ಶಾಲೆ, ಸಾರ್ವಜನಿಕ ಭಾವಿ, ಕೆರೆ, ಅರಣ್ಯ ಪ್ರದೇಶ ಮತ್ತು ಹೆದ್ದಾರಿಯಿದೆ ಎಂದು ಅರ್ಜಿದಾರರು ದೂರಿದ್ದರು.

ಅಲ್ಲದೆ, ಒಂದೊಮ್ಮೆ ಘಟಕ ಸ್ಥಾಪನೆಯಾದರೆ ಸ್ಥಳೀಯ ಜನ, ಪ್ರಾಣಿ-ಪಕ್ಷಿಗಳಿಗೆ ಪ್ರಾಣಪಾಯ ಒದಗಲಿದೆ. ಘಟಕ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆದುಕೊಂಡಿಲ್ಲ. ಆದ್ದರಿಂದ ಘಟಕವನ್ನು ಬೇರೊಂದು ಸ್ಥಳಕ್ಕೆ ಸ್ಥಳಾಂತರಿಸಲು ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ABOUT THE AUTHOR

...view details