ಕರ್ನಾಟಕ

karnataka

ETV Bharat / state

ಮಹಿಳೆಯ ಜೀವ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಗರ್ಭಪಾತಕ್ಕೆ ಅನುಮತಿ ನೀಡಿದ ಹೈಕೋರ್ಟ್​​ - Abortion news

ಗರ್ಭಪಾತದಿಂದ ಭವಿಷ್ಯದಲ್ಲಿ ಎದುರಾಗುವ ಯಾವುದೇ ರೀತಿಯ ತೊಂದರೆಗೂ ಅರ್ಜಿದಾರರೇ ಹೊಣೆಯಾಗಿರಬೇಕು ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಗರ್ಭಪಾತಕ್ಕೆ ಅನುಮತಿ ನೀಡಿದೆ.

High Court
ಹೈಕೋರ್ಟ್​

By

Published : May 4, 2020, 11:49 PM IST

ಬೆಂಗಳೂರು: ತಾಯಿಯ ಜೀವ ಮತ್ತು ಆರೋಗ್ಯದ ಹಿತದೃಷ್ಟಿ ಪರಿಗಣಿಸಿರುವ ಹೈಕೋರ್ಟ್ ಮಹಿಳೆಯೊಬ್ಬರ ಗರ್ಭಪಾತಕ್ಕೆ ಅನುಮತಿ ನೀಡಿದೆ. ಗರ್ಭದಲ್ಲಿರುವ 22 ವಾರದ ಭ್ರೂಣದ ಬೆಳವಣಿಗೆ ನ್ಯೂನತೆಯಿಂದ ಕೂಡಿದ್ದು, ತಾಯಿಯ ಜೀವ ಮತ್ತು ಆರೋಗ್ಯಕ್ಕೆ ಸಮಸ್ಯೆಯಾಗಲಿದೆ ಎಂಬ ತಜ್ಞ ವೈದ್ಯರ ಸಲಹೆ ಪರಿಗಣಿಸಿ ಗರ್ಭಪಾತಕ್ಕೆ ಅನುಮತಿ ನೀಡಿದೆ.

ನಗರದ 32 ವರ್ಷದ ಗರ್ಭಿಣಿ ಮಹಿಳೆಯೊಬ್ಬರು ಗರ್ಭಪಾತಕ್ಕೆ ಅನುಮತಿ ಕೋರಿ ಹೈಕೋರ್ಟ್​ಗೆ ತುರ್ತು ಅರ್ಜಿ ಸಲ್ಲಿಸಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ನಡೆಸಿದ ಅಲ್ಟ್ರಾ ಸೌಂಡ್ ಸ್ಕಾೃನಿಂಗ್ ವರದಿಯಲ್ಲಿ ಭ್ರೂಣದ ಶ್ವಾಸಕೋಶ ಸರಿಯಾಗಿ ಬೆಳವಣಿಗೆಯಾಗಿಲ್ಲ. ಕರುಳಿಗೆ ರಕ್ತ ಸಂಚಲನವಿಲ್ಲ. ಹೃದಯವೂ ನ್ಯೂನತೆಯಿಂದ ಕೂಡಿದೆ ಎಂದು ತಿಳಿದು ಬಂದಿತ್ತು. ಹೆರಿಗೆ ವೇಳೆ ಮಗು ಬದುಕುವ ಸಾಧ್ಯತೆ ತೀರಾ ಕಡಿಮೆ ಇದ್ದು, ತಾಯಿಯ ಜೀವಕ್ಕೂ ಅಪಾಯವಿದೆ ಎಂದು ವೈದ್ಯರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆ ಗರ್ಭಪಾತಕ್ಕೆ ಅನುಮತಿ ಕೋರಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ಪೀಠ, ಅರ್ಜಿದಾರ ಮಹಿಳೆಯು ತಮ್ಮ ಸ್ವಂತ ವೆಚ್ಚದಲ್ಲಿ ಗರ್ಭಪಾತ ಮಾಡಿಸಿಕೊಳ್ಳಬೇಕು. ಗರ್ಭಪಾತದಿಂದ ಭವಿಷ್ಯದಲ್ಲಿ ಎದುರಾಗುವ ಯಾವುದೇ ರೀತಿಯ ತೊಂದರೆಗೂ ಅರ್ಜಿದಾರರೇ ಹೊಣೆಯಾಗಿರಬೇಕು ಎಂದು ಸ್ಪಷ್ಟಪಡಿಸಿ, ಗರ್ಭಪಾತಕ್ಕೆ ಅನುಮತಿ ನೀಡಿದೆ.

ಪೀಠ ತೀರ್ಪಿಗೂ ಮುನ್ನ ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಅವರಿಗೆ ನಿರ್ದೇಶನ ನೀಡಿ, ಆಸ್ಪತ್ರೆಯ ಸ್ತ್ರೀರೋಗ ತಜ್ಞರು, ಶಿಶು ತಜ್ಞರು, ರೇಡಿಯಾಲಜಿ ತಜ್ಞರನ್ನೊಳಗೊಂಡವರ ತಂಡ ರಚಿಸಿ ಮಹಿಳೆಯ ತಪಾಸಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ತಜ್ಞರ ವರದಿಯಲ್ಲೂ ಭ್ರೂಣ ಬೆಳವಣಿಗೆ ನ್ಯೂನತೆಯಿಂದ ಕೂಡಿರುವುದಾಗಿ ತಿಳಿದುಬಂದಿತ್ತು.

ವರದಿ ಪರಿಶೀಲಿಸಿದ ಪೀಠ, ಅರ್ಜಿದಾರ ಮಹಿಳೆಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಗರ್ಭಪಾತಕ್ಕೆ ಅನುಮತಿ ನೀಡಿ ಆದೇಶಿಸಿದೆ.

ABOUT THE AUTHOR

...view details