ಕರ್ನಾಟಕ

karnataka

ETV Bharat / state

ಯತ್ನಾಳ್​ ವಿರುದ್ಧ ಹೈಕಮಾಂಡ್​ ಕ್ರಮಕೈಗೊಳ್ಳಬೇಕು : ರೇಣುಕಾಚಾರ್ಯ ಕಿಡಿ - High Command must take action against Yatnal

ಬಸವರಾಜ ಬೊಮ್ಮಾಯಿ ಆಯ್ಕೆಯಿಂದ ಮತ್ತೆ ರೆಬಲ್​ ಆಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪನವರ ಕಾರ್ಯಕ್ಷಮತೆಯನ್ನು ಹೈಕಮಾಂಡ್​​ ಹೊಗಳಿದೆ. ಅಂತಹ ವ್ಯಕ್ತಿಯ ಕುರಿತು ಹಗುರವಾಗಿ ಮಾತನಾಡುವುದು ಸರಿಯಲ್ಲ. ಅಲ್ಲದೆ ಇದು ಪಕ್ಷಕ್ಕೆ ಅವಮಾನ ಮಾಡಿದಂತೆ, ಇಂತಹವರ ವಿರುದ್ಧ ಪಕ್ಷದ ವರಿಷ್ಠರು ಕ್ರಮಕೈಗೊಳ್ಳುತ್ತಾರೆ..

renukacharya
ರೇಣುಕಾಚಾರ್ಯ

By

Published : Jul 30, 2021, 5:01 PM IST

ಬೆಂಗಳೂರು :ಯಡಿಯೂರಪ್ಪನವರ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ. ಪಕ್ಷದ ವಿರುದ್ಧವೂ ಮಾತನಾಡುತ್ತಿರುವ ಯತ್ನಾಳ್ ಮೇಲೆ ಹೈಕಮಾಂಡ್ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ನಗರದ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಸಾಮರ್ಥ್ಯ, ನಾಯಕತ್ವ, ಹೋರಾಟ ದೊಡ್ಡದು. ನೂರಾರು ಪಾದಯಾತ್ರೆ, ಸಾವಿರಾರು ಹೋರಾಟ ಮಾಡಿದ್ದಾರೆ.

ಅನೇಕ ಬಾರಿ ಜೈಲಿಗೆ ಹೋದವರು. ಯಾರೋ ಒಬ್ಬರು ಮಾತಾಡಿದರೆ ಗೌರವ‌ ಕಡಿಮೆ‌ ಆಗಲ್ಲ‌. ಬಿಜೆಪಿಗೆ ಯಡಿಯೂರಪ್ಪ ಬಗ್ಗೆ ಅಪಾರ ಗೌರವ ಇದೆ. ಅವರ ಹೋರಾಟ ಮತ್ತು ಶ್ರಮದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರು.

ಯತ್ನಾಳ್​ ವಿರುದ್ಧ ರೇಣುಕಾಚಾರ್ಯ ಕಿಡಿ

ಮೋಜು, ಮಸ್ತಿಗಾಗಿ ಯಡಿಯೂರಪ್ಪ ಅಧಿಕಾರದಲ್ಲಿ ಇರಲಿಲ್ಲ :ಇಬ್ಬರಿದ್ದಾಗ ಯಡಿಯೂರಪ್ಪ ಯೋಚಿಸಲಿಲ್ಲ. ಈಗ 120 ಸಂಖ್ಯೆ ತಲುಪಿದೆ. ಬಿಎಸ್​​ವೈ ರಾಷ್ಟ್ರೀಯ ನಾಯಕರಿಗೆ ಗೌರವಿಸಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೋಜು, ಮಸ್ತಿಗಾಗಿ ಅವರು ಅಧಿಕಾರದಲ್ಲಿ ಇರಲಿಲ್ಲ. ಹೈಕಮಾಂಡ್ ಹಾಗೂ ಸಂಘ ಪರಿವಾರದವರು ಯಡಿಯೂರಪ್ಪ ಅವರನ್ನು ಶ್ಲಾಘಿಸಿದ್ದಾರೆ. ಅವರ ಬಗ್ಗೆ ಮಾತನಾಡುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.

ಜೆಡಿಎಸ್​​​ ಸೇರಿದಾಗ ಹಿಂದುತ್ವ ಇರಲಿಲ್ಲವೇ? :ನೀವು ಜೆಡಿಎಸ್ ಪಕ್ಷಕ್ಕೆ ಹೋಗಿದ್ರಲ್ಲ ಅವತ್ತು ಹಿಂದುತ್ವ ಎಲ್ಲಿ ಹೋಗಿತ್ತು, ಸ್ವಾರ್ಥಕ್ಕಾಗಿ ಹಿಂದುತ್ವ ಬೇಕಾ? ಅಲ್ಲಿ ನೀವು ಅಲ್ಪಸಂಖ್ಯಾತರ ಓಲೈಕೆ ಮಾಡಿಲ್ವಾ ಎಂದು ಯತ್ನಾಳ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ಮಠಾಧೀಶರು ಮನೆಗೆ ಬಂದಾಗ ಕಾಣಿಕೆ ನೀಡುವುದು ಸಂಸ್ಕೃತಿ :ಬಿಜೆಪಿ ಬಗ್ಗೆ ಮಾತನಾಡಿದರೆ ಪಕ್ಷಕ್ಕೆ ಅವಮಾನ ಮಾಡಿದಂತೆ. ಪಕ್ಷ ಇದನ್ನು ಗಮನಿಸಿ ಕ್ರಮ‌ಕೈಗೊಳ್ಳಬೇಕು. ಸ್ವಾಮೀಜಿಗಳು ಯಡಿಯೂರಪ್ಪ ಪರ‌ ಸಮಾವೇಶ ಮಾಡಿಲ್ಲ, ಇದನ್ನ ಅರಮನೆ ಮೈದಾನದಲ್ಲಿ ಸ್ವಾಮೀಜಿಗಳೇ ಹೇಳಿದ್ದಾರೆ. ಮಠಾಧೀಶರು ಮನೆಗೆ ಬಂದಾಗ ಕಾಣಿಕೆ ನೀಡುವುದು ಸಂಸ್ಕೃತಿ. ಕಾಣಿಕೆಯಿಂದಲೇ ಸ್ವಾಮೀಜಿಗಳು ಶಾಲೆ‌-ಕಾಲೇಜು ನಡೆಸುತ್ತಾರೆ. ಇಂತಹ ಹೇಳಿಕೆ ಮಠಾಧೀಶರಿಗೆ ಮಾಡಿದ ಅವಮಾನವಾಗಿದ್ದು, ಬೇಷರತ್ ಕ್ಷಮೆ‌ ಕೇಳಬೇಕು ಎಂದು ಆಗ್ರಹಿಸಿದರು.

ದೆಹಲಿಗೆ ಹೋದ ಮಾತ್ರಕ್ಕೆ ಸಚಿವರಾಗಲ್ಲ :ದೆಹಲಿಗೆ ತೆರಳಲ್ವಾ ಅನ್ನೋ ವಿಚಾರ ಕುರಿತು ಮಾತನಾಡಿದ ರೇಣುಕಾಚಾರ್ಯ, ದೆಹಲಿಯಿಂದ ಬಂದು ಕ್ಷೇತ್ರಕ್ಕೆ ಹೋಗಿ, ಕೆಲಸ ನಿಮಿತ್ತ ಬೆಂಗಳೂರಿಗೆ ಬಂದಿದ್ದೇನೆ. 40 ಕೆರೆ ಒಡೆದಿತ್ತು, ಅದರ ರಿಪೇರಿ ಮಾಡಲು ಹೇಳಿದ್ದೆ. ಬೆಳೆಗಳು ಹಾಳಾಗಿರೋ ಬಗ್ಗೆ ಜಂಟಿ ಸಮೀಕ್ಷೆ ಮಾಡಿಸುತ್ತೇವೆ. ಕ್ಷೇತ್ರಕ್ಕೆ ತೆರಳಿ ಅಲ್ಲಿ ಪರಿಹಾರ ಕಾರ್ಯ ಮಾಡಲಾಗುವುದು. ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿಗೆ ಅತಿವೃಷ್ಟಿ, ಅನಾವೃಷ್ಟಿ ಪರಿಹಾರ ಬಿಡುಗಡೆ ಮಾಡಲು ಮನವಿ ಮಾಡುತ್ತೇನೆ. ಹೊಸ ಮುಖ್ಯಮಂತ್ರಿ ಜೊತೆ ಕೂಡ ಮಾತನಾಡಿದ್ದೇನೆ. ದೆಹಲಿಗೆ ಹೋದ ಮಾತ್ರಕ್ಕೆ ಮಂತ್ರಿ ಆಗ್ತಾರೆ ಅನ್ನೋದು ಸುಳ್ಳು. ಯಾರ್ಯಾರಿಗೆ ಅದೃಷ್ಟ ಇದೆಯೋ ಅವರೆಲ್ಲ ಮಂತ್ರಿ ಆಗ್ತಾರೆ ಎಂದರು.

ABOUT THE AUTHOR

...view details