ಬೆಂಗಳೂರು:ರಾಜ್ಯಪಾಲರಿಂದ ಬುಲಾವ್ ಬಂದಿಲ್ಲ, ಶಿವಮೊಗ್ಗ ಘಟನೆ ಕುರಿತು ಅವರೊಂದಿಗೆ ಯಾವುದೇ ರೀತಿಯ ಮಾತುಕತೆಯನ್ನೂ ನಡೆಸಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ರಾಜಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ರಾಜ್ಯಪಾಲರು ಬುಲಾವ್ ಕೊಟ್ಟಿಲ್ಲ. ಕುವೆಂಪು ವಿವಿ ಸಿಂಡಿಕೇಟ್ ಬಗ್ಗೆ ನಾನೇ ರಾಜ್ಯಪಾಲರ ಅಪಾಯಿಂಟ್ಮೆಂಟ್ ತೆಗೆದುಕೊಂಡಿದ್ದು, ಶಿವಮೊಗ್ಗ ಘಟನೆ ಬಗ್ಗೆ ರಾಜ್ಯಪಾಲರ ಜೊತೆ ಯಾವುದೇ ಚರ್ಚೆ ನಡೆಸಿಲ್ಲ. ಸಿಂಡಿಕೇಟ್ ಸದಸ್ಯರು ರಾಜ್ಯಪಾಲರನ್ನ ಭೇಟಿಯಾಗಬೇಕು ಎಂದಿದ್ದರು. ಅದಕ್ಕೆ ನಾನು ಕರೆದುಕೊಂಡು ಹೋಗಿದ್ದೆ, ಆದರೆ ಟಿವಿಗಳಲ್ಲಿ ರಾಜ್ಯಪಾಲರಿಂದ ಈಶ್ವರಪ್ಪಗೆ ಬುಲಾವ್ ಅಂತ ಬರ್ತಾಯಿದೆ. ಇದು ಮೊದಲೇ ನಿಗದಿಯಾದ ಭೇಟಿ ಎಂದು ಹೇಳಿದರು.
ಇದನ್ನೂ ಓದಿ:ಮಾರ್ಚ್ 4ಕ್ಕೆ ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಲಿರುವ ಸಿಎಂ ಬೊಮ್ಮಾಯಿ
ಕಾಂಗ್ರೆಸ್ನಿಂದ ರಾಜ್ಯಪಾಲರಿಗೆ ದೂರು ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಈಶ್ವರಪ್ಪ, ಇದರ ಬಗ್ಗೆ ನಾನೇಕೆ ಚರ್ಚೆ ಮಾಡಲಿ. ಕಾಂಗ್ರೆಸ್ನವರು ಉಂಟು, ರಾಜ್ಯಪಾಲರು ಉಂಟು ಎಂದರು.
ಈಶ್ವರಪ್ಪ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಖಂಡನೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಜಿಪಿ ನಡ್ಡಾ ಹೇಳಿಕೆಗೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಕಾನೂನು ಸಚಿವ ಮಾಧುಸ್ಚಾಮಿ ವಿಧಾನಮಂಡಲದಲ್ಲಿ ಸ್ಪಷ್ಟನೆ ನೀಡಿದ್ದಾರೆ. ರಾಷ್ಟ್ರಧ್ವಜ, ಭಗವಾಧ್ವಜದ ಬಗ್ಗೆ ಸದನದಲ್ಲಿ ಸ್ಪಷ್ಟವಾಗಿ ಈಗಾಗಲೇ ಸಿಎಂ ಮತ್ತು ಮಾಧುಸ್ವಾಮಿ ಉತ್ತರ ಕೊಟ್ಟಿದ್ದಾರೆ. ನಡ್ಡಾ ಅವರಿಗೆ ಕಂಪ್ಲೀಟ್ ಮಾಹಿತಿ ಇದ್ದಂತೆ ಇಲ್ಲ. ಅದರ ಬಗ್ಗೆ ಸಿಎಂ ಮಾಹಿತಿ ಕೊಡುತ್ತೇನೆ ಅಂತ ಹೇಳಿದ್ದಾರೆ ಎಂದು ಹೇಳಿದರು.