ಬೆಂಗಳೂರು: ಸುಪ್ರೀಂ ಕೋರ್ಟ್ ಹಿಜಾಬ್ ವಿಚಾರವಾಗಿ ನೀಡಿರುವ ತೀರ್ಪು ಸ್ವಾಗತಿಸುತ್ತೇವೆ ಮತ್ತು ನ್ಯಾಯಾಲಯದ ಮುಂದಿನ ತೀರ್ಪಿಗಾಗಿ ಕಾಯುತ್ತಿರುತ್ತೇವೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ತಿಳಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸ್ತ್ರೀ ಸ್ವಾತಂತ್ರ್ಯಕ್ಕೆ ಗೌರವ ನೀಡುವ ರೀತಿ ಉತ್ತಮ ತೀರ್ಪು ಬರುತ್ತದೆ ಎನ್ನುವ ನಿರೀಕ್ಷೆ ಸರ್ಕಾರಕ್ಕೆ ಇತ್ತು. ಆದರೆ, ಇದು ವಿಭಿನ್ನ ತೀರ್ಪು ಬಂದಿದೆ. ಮುಂದಿನ ತೀರ್ಪಿಗೆ ಸರ್ಕಾರ ಕಾಯಲಿದೆ. ಇನ್ನು ಸರ್ಕಾರದ ಶಿಕ್ಷಣ ಕಾಯ್ದೆಯ ಪ್ರಕಾರ ಶಾಲಾ ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲ. ಸರ್ಕಾರಿ ಮತ್ತು ಎಲ್ಲ ಶಾಲೆಗಳು ಅದೇ ಕಾಯ್ದೆಯ ಪ್ರಕಾರ ನಡೆಯುತ್ತದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ನಿಂದ ಇನ್ನೊಂದು ಪೀಠದಲ್ಲಿ ವಿಚಾರಣೆ ನಡೆಯಲಿದ್ದು, ಅಲ್ಲಿನ ತೀರ್ಪು ಬರುವವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳುತ್ತೇವೆ. ಸದ್ಯ ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಮುಂದುವರಿಯುತ್ತದೆ. ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಧಾರ್ಮಿಕ ಆಚರಣೆ, ಚಿಹ್ನೆಗಳ ಪ್ರದರ್ಶನ ಸಲ್ಲದು ಎಂದು ಸರ್ಕಾರದ ತೀರ್ಮಾನವನ್ನು ತಿಳಿಸಿದರು.