ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರ ಪುನರ್ ವಿಂಗಡಣೆ ಕುರಿತು ಮುಂದಿನ 10 ದಿನಗಳಲ್ಲಿ ಅಧಿಸೂಚನೆ ಹೊರಡಿಸುವುದಾಗಿ ಹೈಕೋರ್ಟ್ಗೆ ಸರ್ಕಾರ ಮಾಹಿತಿ ನೀಡಿದೆ. ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ಹಿಂಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯಿದೆಗೆ ತಿದ್ದುಪಡಿ ತಂದಿರುವ ಕ್ರಮವನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಆಶೋಕ್ ಎಸ್.ಕಿಣಗಿ ಅವರಿದ್ದ ನ್ಯಾಯಪೀಠ ನಡೆಸಿತು. ವಿಚಾರಣೆ ವೇಳೆ ಹಾಜರಾಗಿದ್ದ ರಾಜ್ಯ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ಗಳ ಕ್ಷೇತ್ರ ಪುನರ್ ವಿಂಗಡಣೆಗೆ ಸಂಬಂಧಿಸಿದಂತೆ ಪುನರ್ ವಿಂಗಡನಾ ಆಯೋಗ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ. ಜನವರಿ 30 ರಂದ ಈ ಸಂಬಂಧ ಅಂತಿಮ ಅಧಿಸೂಚನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ಸಂಬಂಧ ಮುಂದಿನ 10 ದಿನಗಳಲ್ಲಿ ಅಧಿಸೂಚನೆ ಹೊರಡಿಸುವುದಾಗಿ ವಿವರಿಸಿದರು.
ಮೀಸಲಾತಿ ನಿಗದಿಗೊಳಿಸಲು 2023ರ ಏಪ್ರಿಲ್ 1ರವರೆಗೆ ಕಾಲಾವಕಾಶ:ವಾರ್ಡ್ ಮೀಸಲಾತಿಗೆ ಸಂಬಂಧಿಸಿದಂತೆ ಆಯೋಗ ರಚನೆ ಮಾಡಲಾಗಿದ್ದು, ರಾಜಕೀಯ ಪ್ರಾತಿನಿಧ್ಯ ಪರಿಣಿಸಿ ಮೀಸಲಾತಿ ಕಲ್ಪಿಸಲು ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದ ಪ್ರಕರಣವು ಸುಪ್ರೀಂ ಕೋರ್ಟ್ನಲ್ಲಿದ್ದು ಹಿಂದುಳಿದ ವರ್ಗಕ್ಕೆ ರಾಜಕೀಯ ಮೀಸಲಾತಿ ನಿಗದಿಗೊಳಿಸಲು 2023ರ ಏಪ್ರಿಲ್ 1ರವರೆಗೆ ಕಾಲಾವಕಾಶ ನೀಡಿದೆ ಎಂದು ಅವರು ವಿವರಿಸಿದರು. ಅಲ್ಲದೇ, ಈ ಹಿಂದೆ ಇದ್ದ 233 ತಾಲೂಕುಗಳು ಇದೀಗ 238 ತಾಲೂಕುಗಳಿಗೆ ಏರಿಕೆಯಾಗಿದೆ. 30 ಜಿಲ್ಲೆಗಳು 31ಕ್ಕೆ ಹೆಚ್ಚಳವಾಗಿದೆ ಎಂಬುದಾಗಿ ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಪ್ರಮಾಣ ಪತ್ರವದಲ್ಲಿ ವಿವರಿಸಿದ್ದರು.