ಕರ್ನಾಟಕ

karnataka

ETV Bharat / state

ಸಂಚಾರ ನಿಯಮ ಉಲ್ಲಂಘನೆ ಪ್ರಕರಣ:  ದಂಡದ ರೂಪದಲ್ಲಿ ಸರ್ಕಾರ ಹಗಲು ದರೋಡೆ ಮಾಡುತ್ತಿದೆ - ಹೆಚ್​ಡಿಕೆ ಕಿಡಿಕಿಡಿ - HDkumaraswamy tweet on traffic violation penalties

ಕೊರೊನಾ ಸೋಂಕು ಮತ್ತು ಲಾಕ್​ಡೌನ್ ಪರಿಸ್ಥಿತಿಯಿಂದ ಸಂಪಾದನೆ ಇಲ್ಲದೇ ಕಂಗೆಟ್ಟಿರುವ ಆಟೋರಿಕ್ಷಾ ಚಾಲಕರು ಹಾಗೂ ಕ್ಯಾಬ್ ಡ್ರೈವರ್​ಗಳ ಮೇಲೆ ಮುಲಾಜಿಲ್ಲದೇ ದಂಡ ವಸೂಲಿ ಮಾಡುತ್ತಿರುವ ಸಂಚಾರಿ ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ ಬಡ ಚಾಲಕರಿಗೆ ಬರಸಿಡಿಲು ಬಡಿದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

HDkumaraswamy slams BJP state government
ಹೆಚ್.ಡಿ.ಕುಮಾರಸ್ವಾಮಿ

By

Published : Oct 20, 2020, 3:07 PM IST

ಬೆಂಗಳೂರು:ಕೋವಿಡ್-19 ವೇಳೆ ಸಂಕಟಕ್ಕೆ ಒಳಗಾಗಿದ್ದ ಚಾಲಕರಿಗೆ 5,000 ರೂ. ಸಹಾಯಧನ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಸರ್ಕಾರ ಚಾಲಕರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿತ್ತು. ಆದರೆ, ಅನುಷ್ಠಾನಕ್ಕೆ ತರಲಿಲ್ಲ. ಚಾಲಕರಿಗೆ ಪರಿಹಾರ ಕೊಡದೇ ಮಾತು ತಪ್ಪಿದ ಸರ್ಕಾರ ಈಗ ದಂಡ ವಸೂಲಿಯ ನೆಪದಲ್ಲಿ ಚಾಲಕರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕಳೆದ ಏಳು ತಿಂಗಳಿಂದ ಸಂಪಾದನೆ ಇಲ್ಲದೇ ಹತಾಶರಾಗಿರುವ ರಿಕ್ಷಾ, ಕ್ಯಾಬ್ ಚಾಲಕರಿಗೆ ದಂಡದ ರೂಪದಲ್ಲಿ ಹಗಲು ದರೋಡೆ ಮಾಡುತ್ತಿರುವುದು ಸರ್ಕಾರದ ರಾಕ್ಷಸೀ ಪ್ರವೃತ್ತಿ ಎಂದು ಕಿಡಿಕಾರಿದ್ದಾರೆ.

ಬಡ ಚಾಲಕರ ಹಿಡಿಶಾಪ ಸರ್ಕಾರಕ್ಕೆ ತಗಲುವ ಮುನ್ನವೇ ದರ್ಪ ದೌರ್ಜನ್ಯದ ಗದಾ ಪ್ರಹಾರ ತಕ್ಷಣವೇ ನಿಲ್ಲಿಸಬೇಕು. ಬೆಂದ ಮನೆಯಲ್ಲಿ ಗಳ ಅರಿಯುವ ಕೆಲಸ ಜವಾಬ್ದಾರಿಯುತ ಸರ್ಕಾರಕ್ಕೆ ಶೋಭೆಯಲ್ಲ. ಸರ್ಕಾರ ಕೂಡಲೇ ಇದನ್ನ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ-ಸಂಚಾರ ನಿಯಮ ಉಲ್ಲಂಘನೆ, ಒಂದೇ ವಾರಕ್ಕೆ 4 ಕೋಟಿಗೂ ಅಧಿಕ ದಂಡ ವಸೂಲಿ: ರವಿಕಾಂತೇಗೌಡ

ಕೊರೊನಾ ಸೋಂಕು ಮತ್ತು ಲಾಕ್​ಡೌನ್ ಪರಿಸ್ಥಿತಿಯಿಂದ ಸಂಪಾದನೆ ಇಲ್ಲದೇ ಕಂಗೆಟ್ಟಿರುವ ಆಟೋರಿಕ್ಷಾ ಚಾಲಕರು ಹಾಗೂ ಕ್ಯಾಬ್ ಡ್ರೈವರ್​ಗಳ ಮೇಲೆ ಮುಲಾಜಿಲ್ಲದೇ ದಂಡ ವಸೂಲಿ ಮಾಡುತ್ತಿರುವ ಸಂಚಾರಿ ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ ಬಡ ಚಾಲಕರಿಗೆ ಬರಸಿಡಿಲು ಬಡಿದಂತಾಗಿದೆ ಎಂದು ಹೇಳಿದ್ದಾರೆ.

ಮಾಸ್ಕ್ ಧರಿಸಿದವರಿಗೆ ಕಾನೂನು - ಸುವ್ಯವಸ್ಥೆ ಹಾಗೂ ಸಂಚಾರಿ ಪೊಲೀಸರು ದಂಡ ವಸೂಲಿ ದಂಧೆಗೆ ಇಳಿದಿರುವುದು ನಾಗರಿಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಜಾಗೃತಿ ಮೂಡಿಸಬೇಕಾದ ಪೊಲೀಸರು ವಾಹನ ತಪಾಸಣೆ ಹೆಸರಲ್ಲಿ ಬಡ ಚಾಲಕರನ್ನು ಸುಲಿಯುತ್ತಿರುವ ನಿರ್ದಾಕ್ಷಿಣ್ಯ ವರ್ತನೆ ಸರಿಯಲ್ಲ. ಎಲ್ಲ ದಾಖಲಾತಿಗಳನ್ನು ತೋರಿಸಿದರೂ ಒಂದಲ್ಲ ಒಂದು ಕಾನೂನು ತಗಾದೆ ತೆಗೆದು ಚಾಲಕರನ್ನು ಹಗಲು ದರೋಡೆ ಮಾಡುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು. ಪೊಲೀಸರಿಗೆ ದಂಡ ವಸೂಲಿಗೆ ಟಾರ್ಗೆಟ್ ನೀಡಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಈಗಷ್ಟೇ ರಸ್ತೆಗೆ ಇಳಿದಿರುವ ಆಟೋರಿಕ್ಷಾ ಮತ್ತು ಕ್ಯಾಬ್ ಚಾಲಕರು ಪ್ರಯಾಣಿಕರ ಕೊರತೆಯಿಂದ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇಂಥ ಸಂಕಷ್ಟ ಪರಿಸ್ಥಿತಿಯಲ್ಲಿ ಪೊಲೀಸರು ದಂಡ ವಸೂಲಿಯನ್ನೇ ಮೂಲಮಂತ್ರವಾಗಿರಿಸಿ ಕೊಂಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರ ತಕ್ಷಣ ಚಾಲಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ತಡೆಯೊಡ್ಡಿ ಔದಾರ್ಯ ತೋರುವ ಮೂಲಕ ಚಾಲಕರಿಗೆ ತುಸು ನೆಮ್ಮದಿ ನೀಡಬೇಕಾದ ತುರ್ತು ಅಗತ್ಯವಿದೆ. ಎಗ್ಗಿಲ್ಲದೆ ದಂಡ ವಸೂಲಿ ಮಾಡುವ ಪೋಲಿಸರ ಕ್ರಮದಿಂದ ಚಾಲಕರು ನಲುಗಿ ಹೋಗಿದ್ದಾರೆ. ಇಂತಹ ಕಡು ಕಷ್ಟಕಾಲದಲ್ಲಿ ಸರ್ಕಾರ ಮಾನವೀಯತೆಯನ್ನು ಪ್ರದರ್ಶಿಸಬೇಕು ಎಂದು ಒತ್ತಾಯಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details