ಬೆಂಗಳೂರು:ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಉಳ್ಳವರೇ ಭೂಮಿಯ ಒಡೆಯರು ಎಂಬ ಕಾನೂನು ಜಾರಿಗೆ ತರಲು ಮುಂದಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ತರುವ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ಬಗ್ಗೆ ಚರ್ಚೆ ನಡೆಸಲು ಸಿದ್ದರಾಮಯ್ಯ ತಮ್ಮ ಕಚೇರಿಯಲ್ಲಿ ಇಂದು ಸಂಜೆ ಪಕ್ಷದ ಹಿರಿಯ ನಾಯಕರ ಸಭೆ ಕರೆದಿದ್ದರು.
ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ಸರ್ಕಾರ ತಿದ್ದುಪಡಿ ತರಲು ಮುಂದಾಗಿದೆ. ಕಾಯ್ದೆಯಲ್ಲಿನ ಕೆಲ ಅಂಶಗಳನ್ನು ಬದಲಾವಣೆ ಮಾಡುವುದು ಸರ್ಕಾರದ ಉದ್ದೇಶ. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದ ಬಳಿಕ ಉಳುವವನೇ ಹೊಲದ ಒಡೆಯ ಎಂದಾಯಿತು. ಯಾರೆಲ್ಲಾ ಭೂಮಿಯ ಒಡೆಯರು ಆಗಬಹುದು ಎಂಬುದನ್ನು ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. ಗುತ್ತಿಗೆ ಆಧಾರದ ಮೇಲೆ ಭೂಮಿ ಉಳುಮೆ ಮಾಡುತ್ತಿದ್ದವರಿಗೆ ಇದರಿಂದ ಅನುಕೂಲವಾಗಿತ್ತು. ಇಂದಿರಾ ಗಾಂಧಿ ಮತ್ತು ದೇವರಾಜ ಅರಸು ಅವರ ಸರ್ಕಾರ ಉಳುವವನೇ ಭೂಮಿಯ ಒಡೆಯ ಎಂದು ಮಾಡಿದರೆ, ಈಗಿನ ಬಿಜೆಪಿ ಸರ್ಕಾರ ಉಳ್ಳವನೇ ಭೂಮಿಯ ಒಡೆಯ ಎಂದು ಮಾಡಲು ಮುಂದಾಗಿದೆ ಎಂದು ಕಿಡಿಕಾರಿದರು.
ಭೂ ಸುಧಾರಣಾ ಕಾಯ್ದೆಯ 79 ಎ, ಬಿ, ಸಿ ಮತ್ತು 80 ಹಾಗೂ ಸೆಕ್ಷನ್ 63 ಮುಖ್ಯ ತಿದ್ದುಪಡಿಗಳನ್ನು ಪೂರ್ವಾನ್ವಯ ಆಗುವಂತೆ ರದ್ದು ಮಾಡುವುದು ಹಾಗೂ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ವಜಾ ಮಾಡುವುದು ಸರ್ಕಾರದ ಉದ್ದೇಶ. ಕಾನೂನಿನಲ್ಲಿ ನ್ಯೂನತೆ ಇದ್ದರೆ ಮಾತ್ರ ಕಾಲ ಕಾಲಕ್ಕೆ ಬದಲಾವಣೆ ಮಾಡಬೇಕು. ಅದು ಬಿಟ್ಟು ನೆಗಡಿ ಬಂದಿದೆ ಎಂಬ ಕಾರಣಕ್ಕೆ ಮೂಗು ಕುಯ್ಯುವುದು, ಗಾಯವಾಗಿದೆ ಎಂದು ಕಾಲು ಕತ್ತರಿಸುವ ಕೆಲಸಕ್ಕೆ ಕೈ ಹಾಕಬಾರದು ಎಂದರು.
ಕಾರ್ಪೊರೇಟ್ ಕಂಪನಿಗಳಿಗೆ, ಶ್ರೀಮಂತರಿಗೆ, ಬಂಡವಾಳಶಾಹಿಗಳಿಗೆ ಕೃಷಿ ಭೂಮಿ ಧಾರೆ ಎರೆಯಲು ಸರ್ಕಾರ ಮುಂದಾಗಿದೆ. ಉಳುವವರಿಗೆ ಭೂಮಿ ಸಿಗಬೇಕು. ಒಬ್ಬರಿಗೆ ಉದ್ಯೋಗ ದೊರಕಬೇಕು ಎಂಬ ಕಾರಣಕ್ಕೆ ಈ ಹಿಂದೆ ಭೂ ಸುಧಾರಣಾ ಕಾಯ್ದೆ ಜಾರಿಗೆ ತರಲಾಗಿತ್ತು. ಕಾಯ್ದೆ ತಿದ್ದುಪಡಿಯಿಂದ ಭೂ ಮಾಫಿಯಾ ಆರಂಭವಾಗುತ್ತದೆ. ರಿಯಲ್ ಎಸ್ಟೇಟ್ ದಂಧೆಗೆ ಅವಕಾಶವಾಗುತ್ತದೆ. ಶ್ರೀಮಂತರು ಭೂಮಿ ಖರೀದಿ ಮಾಡಿ ಲ್ಯಾಂಡ್ ಬ್ಯಾಂಕ್ ಮಾಡಿಕೊಳ್ಳುತ್ತಾರೆ. ಇದರಿಂದ ಸಣ್ಣ ಹಿಡುವಳಿದಾರರಿಗೆ ತೊಂದರೆಯಾಗಿ ಭೂಮಿ ಕಳೆದುಕೊಂಡು ಅವರು ಕೃಷಿ ಕೂಲಿ ಕಾರ್ಮಿಕರಾಗುತ್ತಾರೆ. ಹೀಗಾಗಿ ಸಂಪುಟದ ನಿರ್ಣಯವನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದರು.
ಈ ಕುರಿತು ಪಕ್ಷದ ಹಿರಿಯ ನಾಯಕರು, ರೈತ ಸಂಘಟನೆಗಳ ಮುಖಂಡರ ಜೊತೆ ಮತ್ತೊಂದು ಸುತ್ತಿನಲ್ಲಿ ಸಮಗ್ರವಾಗಿ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು. ಸಭೆಯಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿ.ಎಂ.ಇಬ್ರಾಹಿಂ, ರಮೇಶ್ ಕುಮಾರ್, ಸಲೀಂ ಅಹಮದ್, ಈಶ್ವರ್ ಖಂಡ್ರೆ, ದಿನೇಶ್ ಗುಂಡೂರಾವ್, ಡಾ. ಹೆಚ್.ಸಿ.ಮಹಾದೇವಪ್ಪ, ಟಿ.ಬಿ.ಜಯಚಂದ್ರ, ಜಮೀರ್ ಅಹಮದ್ ಖಾನ್, ವಿ.ಎಸ್.ಉಗ್ರಪ್ಪ ಮತ್ತಿತರರು ಭಾಗವಹಿಸಿದ್ದರು.