ಬೆಂಗಳೂರು:ಮುಂಬರುವ ಅಧಿವೇಶನದಲ್ಲೇ ಬಿಬಿಎಂಪಿ ವಿಧೇಯಕವನ್ನು ಅಂಗೀಕರಿಸಲು ಸರ್ಕಾರ ಚಿಂತನೆ ನಡೆಸಿದೆ.
ಶುಕ್ರವಾರದಂದು ನಡೆದ ಬಿಬಿಎಂಪಿ ವಿಧೇಯಕ ಕುರಿತಾದ ಜಂಟಿ ಸದನ ಪರಿಶೀಲನಾ ಸಮಿತಿ ಸಭೆಯಲ್ಲಿ ಕಾನೂನು ಸಚಿವ ಮಾಧುಸ್ವಾಮಿ, ಈ ಅಧಿವೇಶನದಲ್ಲೇ ಸಮಿತಿ ಮಧ್ಯಂತರ ವರದಿ ಸಲ್ಲಿಸುವ ಬಗ್ಗೆ ವಿಷಯ ಪ್ರಸ್ತಾಪಿಸಿದ್ದಾರೆ. ಆ ಮೂಲಕ ಬಿಬಿಎಂಪಿ ವಿಧೇಯಕ ಅಂಗೀಕರಿಸಿ ಪಾಲಿಕೆ ಚುನಾವಣೆಯನ್ನು ಮುಂದಿನ ವರ್ಷಕ್ಕೆ ಮುಂದೂಡುವ ಯೋಚನೆ ಸರ್ಕಾರದ್ದಾಗಿದೆ.
ಬಿಬಿಎಂಪಿ ವಿಧೇಯಕ ಕುರಿತಾದ ಜಂಟಿ ಸದನ ಪರಿಶೀಲನಾ ಸಮಿತಿ ಸಭೆ ಜಂಟಿ ಸದನ ಪರಿಶೀಲನಾ ಸಮಿತಿ ಸಭೆಯಲ್ಲಿ ಎಲ್ಲಾ ಸದಸ್ಯರು ವಾರ್ಡ್ಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ 225ಕ್ಕೆ ವಾರ್ಡ್ ಹೆಚ್ಚಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದು ಬೇಡ. ಮುಂದೆ ಚರ್ಚಿಸಿ ಅದನ್ನು ಇನ್ನಷ್ಟು ಹೆಚ್ಚಿಸಬೇಕೋ ಅಥವಾ ಇನ್ನೂ ಕಡಿಮೆ ಮಾಡಬೇಕೋ ಎಂಬುದರ ಬಗ್ಗೆ ಸಮಾಲೋಚನೆ ನಡೆಸುವುದು ಒಳಿತು ಎಂಬ ಅಭಿಪ್ರಾಯವನ್ನು ಸಮಿತಿ ಸದಸ್ಯರು ನೀಡಿದ್ದಾರೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ಸಭೆಯಲ್ಲಿ ವರದಿ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಎರಡು ಹೊಸ ಉಪಸಮಿತಿ ರಚಿಸಲಾಗಿದೆ. ಅಧಿವೇಶನದ ವೇಳೆ ಮಧ್ಯಂತರ ವರದಿ ಸಲ್ಲಿಸಿ ವಿಧೇಯಕ ಅಂಗೀಕರಿಸುವ ಯೋಚನೆ ಇದೆ ಎಂಬುದಾಗಿ ಅವರು ತಿಳಿಸಿದ್ದಾರೆ. ಆ ಮೂಲಕ ಬಿಬಿಎಂಪಿ ಚುನಾವಣೆಯನ್ನು ವಾರ್ಡ್ ಮರು ವಿಂಗಡಣೆಗಾಗಿ ಮುಂದೂಡುವ ಪ್ರಯತ್ನ ಸರ್ಕಾರದ್ದಾಗಿದೆ ಎಂದು ಹೇಳಲಾಗಿದೆ. ಇತ್ತ ಜಂಟಿ ಸದನ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್.ರಘು, ಅಧಿವೇಶನಕ್ಕೂ ಸಮಿತಿ ವರದಿಗೂ ಯಾವುದೇ ಸಂಬಂಧ ಇಲ್ಲ. ನಮಗೆ 90 ದಿನಗಳ ಕಾಲಾವಧಿ ಇದೆ. ಅಷ್ಟರೊಳಗೆ ವರದಿ ಸಿದ್ಧಪಡಿಸಿ ಸಲ್ಲಿಕೆ ಮಾಡಲಿದ್ದೇವೆ. ಮಧ್ಯಂತರ ವರದಿ ನೀಡುವ ಬಗ್ಗೆ ಸರ್ಕಾರದ ವತಿಯಿಂದ ಸಚಿವ ಮಾಧುಸ್ವಾಮಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.