ಬೆಂಗಳೂರು: ರಾಜ್ಯ ಸರ್ಕಾರ ತನ್ನ 'ಕರ್ನಾಟಕ ರಾಜ್ಯ ನಾಗರಿಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು-1996'ಕ್ಕೆ ತಿದ್ದುಪಡಿ ತಂದಿದೆ. ಈ ಕುರಿತು ಪರಿಷ್ಕೃತ ತಿದ್ದುಪಡಿ ನಿಯಮಗಳುಳ್ಳ ಅಧಿಸೂಚನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಸೇವಾ ನಿಯಮಗಳು-ವಿಶೇಷ ಕೋಶ) ಅಧೀನ ಕಾರ್ಯದರ್ಶಿ ಪ್ರಕಟಿಸಿದ್ದಾರೆ.
ಅನುಕಂಪದ ನೌಕರಿಯ ಸೌಲಭ್ಯವನ್ನು ಕುಟುಂಬದ ಅವಲಂಬಿತರಿಗೆ ವಿಸ್ತರಿಸುವ ಹಿನ್ನೆಲೆಯಲ್ಲಿ ಸರ್ಕಾರ 2021ರ ಫೆಬ್ರವರಿ 2ರಂದು ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ 2021ರ ಏಪ್ರಿಲ್ 9ರಂದು ನಿಯಮಗಳಿಗೆ ತಿದ್ದುಪಡಿ ತಂದು 'ಕರ್ನಾಟಕ ರಾಜ್ಯ ನಾಗರಿಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) (ತಿದ್ದುಪಡಿ) ನಿಯಮಗಳು-2021ನ್ನು' ಜಾರಿಗೆ ತಂದಿದೆ. ಆ ಪ್ರಕಾರ ಅನುಕಂಪದ ನೌಕರಿಯನ್ನು ಮೃತನ ಪತ್ನಿ, ಮಗ ಅಥವಾ ಅವಿವಾಹಿತ ಮಗಳಿಗಷ್ಟೇ ಸೀಮಿತಗೊಳಿಸದೆ, ಕುಟುಂಬ ಸದಸ್ಯರೆಲ್ಲರಿಗೂ ವಿಸ್ತರಿಸಲಾಗಿದೆ.
ಹೊಸ ನಿಯಮಗಳು :
ನಿಯಮ 2(ಬಿ) ಪ್ರಕಾರ ಕುಟುಂಬ ಸದಸ್ಯರಿಗೆ ಅನುಕಂಪದ ಉದ್ಯೋಗ
- ಸರ್ಕಾರಿ ಉದ್ಯೋಗಿಯಾಗಿದ್ದ ಪುರುಷ ಸಾವನ್ನಪ್ಪಿದ್ದಲ್ಲಿ ಆತನ ಮೇಲೆ ಅವಲಂಬಿತರಾಗಿದ್ದ ಪತ್ನಿ, ಮಗ, ಮಗಳಿಗೆ ಅನುಕಂಪದ ಉದ್ಯೋಗ ಸಿಗಲಿದೆ. ಮಗಳು ಅವಿವಾಹಿತೆ, ವಿವಾಹಿತೆ, ವಿಚ್ಛೇಧಿತೆ, ವಿಧವೆ ಎಂಬುದು ಹೊಸ ನಿಯಮಗಳಲ್ಲಿ ಪರಿಗಣನೆಯಾಗುವುದಿಲ್ಲ. ಒಂದು ವೇಳೆ ಮೃತನ ಪತ್ನಿ ನೇಮಕಾತಿಗೆ ಅರ್ಹಳಿಲ್ಲದಿದ್ದರೆ ಅಥವಾ ಆಕೆ ಇಚ್ಛಿಸದಿದ್ದರೆ ಆಕೆ ಸೂಚಿಸುವ ಮಗ ಅಥವಾ ಮಗಳು ಉದ್ಯೋಗಕ್ಕೆ ಅರ್ಹತೆ ಪಡೆಯುತ್ತಾರೆ. ಒಂದು ವೇಳೆ ಪತ್ನಿ ಮೊದಲೇ ಮೃತಪಟ್ಟಿದ್ದರೆ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಆದ್ಯತೆ ನೀಡಲಾಗುತ್ತದೆ.
- ಸರ್ಕಾರಿ ಉದ್ಯೋಗಿಯಾಗಿದ್ದ ವಿವಾಹಿತ ಮಹಿಳೆ ಸಾವನ್ನಪ್ಪಿದ್ದಲ್ಲಿ ಆಕೆಯ ಮೇಲೆ ಅವಲಂಬಿತರಾಗಿದ್ದ ಮಗ, ಮಗಳು ಹಾಗೂ ವಿಧುರ ಪತಿಗೆ ಉದ್ಯೋಗಕ್ಕೆ ಅರ್ಹರಾಗಲಿದ್ದಾರೆ. ಮೊದಲಿಗೆ ಮಕ್ಕಳು ಉದ್ಯೋಗಕ್ಕೆ ಅರ್ಹತೆ ಪಡೆದುಕೊಳ್ಳಲಿದ್ದಾರೆ. ಈ ವೇಳೆ ವಿಧುರ ಪತಿ ಮಕ್ಕಳಲ್ಲಿ ಯಾರಿಗೆ ಉದ್ಯೋಗ ಎಂಬುದನ್ನು ನಿರ್ಧರಿಸಲಿದ್ದಾರೆ. ಒಂದು ವೇಳೆ ಮೃತಳ ಮಕ್ಕಳು ಅರ್ಹರಿಲ್ಲದಿದ್ದರೆ ಅಥವಾ ನೇಮಕಾತಿಗೆ ಇಚ್ಛಿಸದೇ ಇದ್ದಲ್ಲಿ ವಿಧುರ ಪತಿ ನೌಕರಿಗೆ ಅರ್ಜಿ ಹಾಕಲು ಅರ್ಹತೆ ಪಡೆಯುತ್ತಾರೆ. ಇನ್ನು, ಪತಿ ಮೃತಪಟ್ಟಿದ್ದಲ್ಲಿ ಮಕ್ಕಳು ತಮ್ಮ ವಯಸ್ಸಿಗೆ ಅನುಗುಣವಾಗಿ ಆದ್ಯತೆ ಪಡೆಯಲಿದ್ದಾರೆ.
- ಸರ್ಕಾರಿ ಉದ್ಯೋಗಿಯಾಗಿದ್ದ ಪುರುಷ ಅವಿವಾಹಿತನಾಗಿದ್ದಲ್ಲಿ ಆತನ ಮೇಲೆ ಅವಲಂಬಿತರಾಗಿದ್ದ ಸೋದರಿ ಅಥವಾ ಸೋದರ ಉದ್ಯೋಗ ಕೋರಬಹುದಾಗಿದೆ. ಒಂದು ವೇಳೆ ಈತನ ತಂದೆ ತಾಯಿ ನಡುವೆ ಮಕ್ಕಳಲ್ಲಿ ಯಾರಿಗೆ ನೌಕರಿ ಸಿಗಬೇಕು ಎಂಬ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾದರೆ ತಾಯಿಯ ಆಯ್ಕೆ ಅಂತಿಮವಾಗಲಿದೆ. ಇನ್ನು, ಮೃತನ ತಂದೆ ತಾಯಿ ಮೊದಲೇ ಮೃತಪಟ್ಟಿದ್ದರೆ ಸೋದರ, ಸೋದರಿಯ ವಯಸ್ಸಿಗೆ ಅನುಗುಣವಾಗಿ ಆದ್ಯತೆ ದೊರೆಯಲಿದೆ.
- ಸರ್ಕಾರಿ ಉದ್ಯೋಗಿಯಾಗಿದ್ದ ಮಹಿಳೆ ಅವಿವಾಹಿತೆಯಾಗಿದ್ದಲ್ಲಿ ಆಕೆಯ ಮೇಲೆ ಅವಲಂಬಿತರಾಗಿದ್ದ ಸೋದರಿ ಅಥವಾ ಸೋದರ ಉದ್ಯೋಗಕ್ಕೆ ಅರ್ಹರಾಗಲಿದ್ದಾರೆ. ಮೃತಳ ತಂದೆ ತಾಯಿ ಯಾವ ಮಕ್ಕಳಿಗೆ ಉದ್ಯೋಗ ಸಿಗಬೇಕು ಎಂಬುದನ್ನು ನಿರ್ಧರಿಸಲು ಅವಕಾಶವಿದೆ. ಒಂದು ವೇಳೆ ತಂದೆ ತಾಯಿ ನಡುವೆ ಭಿನ್ನಾಭಿಪ್ರಾಯ ಉಂಟಾದಲ್ಲಿ ತಾಯಿಯ ಆಯ್ಕೆ ಅಂತಿಮವಾಗಲಿದೆ. ಮೃತಳ ತಂದೆ ತಾಯಿ ಈ ಮೊದಲೇ ಸಾವನ್ನಪ್ಪಿದ್ದಲ್ಲಿ ಸೋದರ, ಸೋದರಿ ವಯಸ್ಸಿಗೆ ಅನುಗುಣವಾಗಿ ಆದ್ಯತೆ ಪಡೆಯಲಿದ್ದಾರೆ.
- ಸರ್ಕಾರಿ ಉದ್ಯೋಗಿಯಾಗಿದ್ದ ಪುರುಷ ಅಥವಾ ಮಹಿಳೆಯು ಸಾವನ್ನಪ್ಪುವ ಮೊದಲೇ ಅವರ ಪತಿ ಅಥವಾ ಪತ್ನಿ ಮೃತಪಟ್ಟಿದ್ದರೆ ಹಾಗೂ ಅವರಿಗೆ ಅಪ್ರಾಪ್ತ ವಯಸ್ಸಿನ ಮಕ್ಕಳಿದ್ದರೆ ಅವರ ಪ್ರಮಾಣೀಕೃತ ಪೋಷಕರು ಕೂಡ ಅನುಕಂಪದ ನೌಕರಿಗೆ ಅರ್ಹರಾಗಲಿದ್ದಾರೆ.
- ಅನುಕಂಪದ ನೌಕರಿಗೆ ಅರ್ಜಿ ಸಲ್ಲಿಸುವ ವೇಳೆ ವಯೋಮಿತಿ 55 ದಾಟಿರಬಾರದು.
- ಸರ್ಕಾರಿ ನೌಕರ ಅಥವಾ ನೌಕರಳು ಸಾವನ್ನಪ್ಪಿದ 1 ವರ್ಷದ ಒಳಗೆ ಅವಲಂಬಿತರು ಅನುಕಂಪದ ಉದ್ಯೋಗ ಕೋರಿ ಮೃತ ವ್ಯಕ್ತಿ ಕೆಲಸ ಮಾಡುತ್ತಿದ್ದ ಇಲಾಖೆಯ ಮುಖ್ಯಸ್ಥರಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.
- ಒಂದು ವೇಳೆ ಅನುಕಂಪದ ಉದ್ಯೋಗಕ್ಕೆ ಅರ್ಹವಿರುವವರು ಅಪ್ರಾಪ್ತರಾದಲ್ಲಿ ನೌಕರ ಮೃತಪಟ್ಟ 2 ವರ್ಷಗಳಲ್ಲಿ 18 ವರ್ಷ ವಯಸ್ಸು ಪೂರೈಸಬೇಕು. ನಂತರದ 2 ವರ್ಷಗಳ ಒಳಗೆ ಅರ್ಜಿ ಸಲ್ಲಿಸಬೇಕು.