ಬೆಂಗಳೂರು: ಬೀದಿ ನಾಯಿಗಳ ಸಂತಾನ ನಿಯಂತ್ರಣ ಯೋಜನೆ ಕೈಗೊಳ್ಳುವ ಸಂಬಂಧ ನಗರಾಭಿವೃದ್ಧಿ ಹಾಗೂ ಪಶುಸಂಗೋಪನೆ ಇಲಾಖೆ ಜಂಟಿ ಸುತ್ತೋಲೆ ಹೊರಡಿಸಿದೆ. ಸುತ್ತೋಲೆಯಲ್ಲಿ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಕೆಲ ಮಾರ್ಗಸೂಚಿಯನ್ನು ಅನುಸರಿಸುವಂತೆ ಸೂಚಿಸಿದೆ. ರಾಜ್ಯದ ಎಲ್ಲಾ ಪುರಸಭೆ, ನಗರಸಭೆ, ಪಟ್ಟಣ ಪಂಚಾಯತ್, ನಗರಪಾಲಿಕೆಗಳ ವ್ಯಾಪ್ತಿಯ ಬೀದಿ ನಾಯಿಗಳ ಸಂತಾನ ನಿಯಂತ್ರಣ (ABC) ಯೋಜನೆಯನ್ನು ಕೈಗೊಳ್ಳುವುದು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ. ಈ ಯೋಜನೆಯನ್ನು ಕ್ರಮಬದ್ಧವಾಗಿ ಅನುಷ್ಕಾನಗೊಳಿಸುವುದರಿಂದ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣವಾಗುವುದರ ಜೊತೆಗೆ ನಾಯಿ ಕಡಿತ ಮತ್ತು ರೇಬಿಸ್ ರೋಗ ನಿಯಂತ್ರಣ ಮಾಡಲು ಸಾಧ್ಯವಾಗುವುದು ಎಂದು ತಿಳಿಸಿದೆ.
ಮಾರ್ಗಸೂಚಿ ಏನು?: -ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ಮಾನ್ಯತೆ ಪಡೆದ ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ಮಾತ್ರ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ನಿಯಮಾನುಸಾರ ನೀಡಬಹುದಾಗಿರುತ್ತದೆ. ಪ್ರತಿ ವರ್ಷ ಸ್ಥಳೀಯ ಸಂಸ್ಥೆಗಳ ಆಯವ್ಯಯದಲ್ಲಿ ಬೀದಿ ನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ಅಗತ್ಯವಿರುವ ಹಣಕಾಸನ್ನು ಹಂಚಿಕೆ ಮಾಡಿಕೊಳ್ಳಬೇಕು. ಯಾವುದೇ ಪ್ರಾಣಿ ಕಲ್ಯಾಣ ಸಂಸ್ಥೆಗಳು ಬೀದಿ ನಾಯಿಗಳ ಸಂತಾನ ನಿಯಂತ್ರಣ (ABC) ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಪ್ರತಿ ಯೋಜನೆಗೆ ಮಾನ್ಯತೆ (Project recognition) ನ್ನು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ಅನುಮತಿ ಪಡೆದ ನಂತರವಷ್ಟೆ ಕೈಗೊಳ್ಳಬೇಕು, ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ, ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ನಡೆಸಲಾದ ನಂತರ ಲಸಿಕೆ ನೀಡಿ ನಾಯಿಗಳನ್ನು ಯಾವ ಪ್ರದೇಶದಿಂದ ಹಿಡಿಯಲಾಗಿತ್ತೋ ಅದೇ ಪ್ರದೇಶದಲ್ಲಿ ವಾಪಸ್ ಬಿಡಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.
ಇದನ್ನೂ ಓದಿ:ಕೊನೆಗೂ ತನ್ನ ಮರಿಗಳೊಂದಿಗೆ ಸೇರಿದ ಶ್ವಾನ: ಇದರ ಹಿಂದಿದೆ ಒಂದು ಮನುಷ್ಯತ್ವದ ಕಥೆ..!