ಬೆಂಗಳೂರು:ರೈತರಿಗೆ ಸರ್ಕಾರದಿಂದ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಆದರೆ, ಬಹುತೇಕ ರೈತರು ಮಾಹಿತಿ ಕೊರತೆಯಿಂದ ಸರಿಯಾಗಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ತೋಟಗಾರಿಕೆ ಇಲಾಖೆಯಲ್ಲಿ ಹಲವು ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ರೈತರಿಗಾಗಿ ಹಲವು ಸಬ್ಸಿಡಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ರೈತರು ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಯೋಜನೆಗಳ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಯಾವ ಯೋಜನೆಗಳಿಗೆ ಸಬ್ಸಿಡಿ :ಅಣಬೆ ಕೃಷಿ ಉತ್ತೇಜಿಸಲು ಅಣಬೆ ಉತ್ಪಾದನಾ ಘಟಕಗಳನ್ನು ಖಾಸಗಿ ವಲಯದಲ್ಲಿ ಸ್ಥಾಪಿಸಲು ಒಟ್ಟು ವೆಚ್ಚದಲ್ಲಿ ಶೇ. 40 ರಷ್ಟು ಅಂದರೆ, ಗರಿಷ್ಠ 8 ಲಕ್ಷ ರೂ.ವರೆಗೆ ಸಹಾಯಧನ ನೀಡಲು ಅವಕಾಶವಿದೆ.
ಇನ್ನು ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ತೋಟಗಾರಿಕೆ ಬೆಳೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಲುವಾಗಿ ವೈಯಕ್ತಿಕ ಫಲಾನುಭವಿಗಳಿಗೆ ಕೃಷಿ ಹೊಂಡಗಳ ನಿರ್ಮಾಣಕ್ಕೆ ಒಟ್ಟು ವೆಚ್ಚದ ಶೇ 50 ಗರಿಷ್ಠ 75 ಸಾವಿರ ರೂ.ವರೆಗೆ ಸಹಾಯಧನ ನೀಡಲು ಅವಕಾಶವಿದೆ. ಅದೇ ರೀತಿ ಸಂರಕ್ಷಿತ ಬೇಸಾರ ಪದ್ಧತಿಗಳನ್ನು ಅಳವಡಿಸಿ ಉತ್ಕೃಷ್ಠ ಗುಣಮಟ್ಟದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ವಿವಿಧ ವಿನ್ಯಾಸಗಳ ಗರಿಷ್ಠ 4 ಸಾವಿರ ಚ.ಮೀ. ಹಸಿರುಮನೆ ಘಟಕಗಳ ನಿರ್ಮಾಣಕ್ಕಾಗಿ ಶೇ. 50 ರಂತೆ ಗರಿಷ್ಠ 447 ರೂ. ಪ್ರತಿ ಚ.ಮೀ ವರೆಗೆ ಸಹಾಯಧನ ಸಿಗಲಿದೆ.
ತೋಟಗಾರಿಕೆ ಬೆಳೆಗಳಿಗಾಗಿ ಸಮಗ್ರ ಪೋಷಕಾಂಶ ಹಾಗೂ ಕೀಟ/ ರೋಗಗಳ ನಿರ್ವಹಣೆಗೆ ಅಗತ್ಯವಾದ ಪರಿಕರಗಳನ್ನು ಖರೀದಿಸಿದ ರೈತರಿಗೆ ಶೇ. 30 ರಂತೆ ಪ್ರತಿ ಹೆಕ್ಟೇರ್ ಗೆ 1,200 ರೂ. ರಂತೆ ಗರಿಷ್ಠ 4 ಹೆಕ್ಟೇರ್ ಪ್ರದೇಶಕ್ಕೆ 4,800 ರೂ. ವರೆಗೆ ಸಹಾಯಧನ ಪಡೆಯಬಹುದು.
ಜೇನು ಸಾಕಾಣಿಕೆ: ತೋಟಗಾರಿಕೆ ಬೆಳೆಗಳಲ್ಲಿ ಪರಾಗಸ್ಪರ್ಶವನ್ನು ಹೆಚ್ಚಿಸಲು ಜೇನು ಕಾಲೋನಿ, ಜೇನು ಪೆಟ್ಟಿಗೆ ಹಾಗೂ ಜೇನುಗಾರಿಕೆಗೆ ಅಗತ್ಯವಿರುವ ಜೇನು ಸಲಕರಣೆಗಳನ್ನು ಖರೀದಿಸಲು ರೈತರಿಗೆ ಶೇ 40 ರಂತೆ 1,600 ರೂ. ಜೇನು ಕಾಲೋನಿ ಮತ್ತು ಜೇನು ಪೆಟ್ಟಿಗೆ ಹಾಗೂ ಜೇನು ಸಲಕರಣೆಗೆ 8 ಸಾವಿರ ರೂ. ವರೆಗೆ ಸಹಾಯಧನ ನೀಡಲಾಗುತ್ತದೆ.
ತೋಟಗಾರಿಕೆ ಕ್ಷೇತ್ರದಲ್ಲಿ ಕೂಲಿ ಕಾರ್ಮಿಕರ ಕೊರತೆ ನಿವಾರಿಸಿ, ಕಡಿಮೆ ಸಮಯದಲ್ಲಿ ಹೆಚ್ಚಿನ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅಗತ್ಯವಾದ ಕೃಷಿ ಉಪಕರಣಗಳು, ಸ್ವಯಂ ಚಾಲಿತ ಯಂತ್ರೋಪಕರಣಗಳು, 20 ಹೆಚ್.ಪಿಗಿಂತ ಕಡಿಮೆ ಸಾಮರ್ಥ್ಯದ ಟ್ರ್ಯಾಕ್ಟರ್ ಹಾಗೂ ಪವರ್ ಟಿಲ್ಲರ್ ಅನ್ನು ಖರೀದಿಸಲು ರೈತರಿಗೆ ಗರಿಷ್ಠ 75 ಸಾವಿರ ರೂ. ವರೆಗೆ ಸಹಾಯಧನ ನೀಡಲು ಅವಕಾಶವಿದೆ.