ಕರ್ನಾಟಕ

karnataka

ETV Bharat / state

ರಾಜ್ಯಕ್ಕೆ ಮಾದರಿಯಾಯ್ತು ಬೆಂಗಳೂರು ಪೊಲೀಸರ 'Golden Hour' ಯೋಜನೆ.. ಹೇಗಿದೆ ಈ ಪ್ಲಾನ್​? - ಗೋಲ್ಡನ್ ಅವರ್ ಯೋಜನೆ

ಕಳೆದ ವರ್ಷ ಬೆಂಗಳೂರಿನಲ್ಲಿ ಜಾರಿಗೆ ತರಲಾಗಿದ್ದ ಗೋಲ್ಡನ್ ಅವರ್ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಈ ಯೋಜನೆ ಜಾರಿಗೆ ತರಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್​ ಒಲವು ತೋರಿದ್ದಾರೆ‌‌.

police
ಬೆಂಗಳೂರು ಪೊಲೀಸ್​

By

Published : Aug 1, 2021, 12:14 PM IST

ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೈಬರ್ ಅಪರಾಧಗಳಿಗೆ ಕಡಿವಾಣ ಹಾಕಲು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಜಾರಿಗೆ ತಂದಿದ್ದ 'ಗೋಲ್ಡನ್ ಅವರ್' ಯೋಜನೆ ನಗರದಲ್ಲಿ ಯಶಸ್ವಿಯಾದ ಬೆನ್ನಲ್ಲೇ ಇದೀಗ ರಾಜ್ಯಾದ್ಯಂತ ವಿಸ್ತರಿಸಲು ಪೊಲೀಸ್​ ಇಲಾಖೆ ಮುಂದಾಗಿದೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ 22 ರಂದು ನಗರ ಪೊಲೀಸ್ ಆಯುಕ್ತರು ಸೈಬರ್ ಕ್ರೈಂ ಇನ್ಸಿಡೆಂಟ್ ರಿಪೋರ್ಟ್ ಸಿಸ್ಟಂಗೆ ಚಾಲನೆ ನೀಡಿದ್ದರು‌‌.‌ ಈ ಮೂಲಕ ಸೈಬರ್ ಖದೀಮರಿಂದ ಹಣ ಕಳೆದುಕೊಂಡ ಕೆಲವೇ ಗಂಟೆಗಳಲ್ಲಿ ಕೂಡಲೇ 112 ಅಥವಾ 100 ಕ್ಕೆ ಕರೆ ಮಾಡಿದರೆ ಪೊಲೀಸ್ ಕಮಿಷನರ್ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್​ಗೆ ಕರೆ ವರ್ಗಾವಣೆಯಾಗಲಿದೆ‌. ಸಮಸ್ಯೆ ಬಗ್ಗೆ ದೂರು ನೀಡಿದರೆ‌, ಕೂಡಲೇ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ, ಖಾತೆಯನ್ನು ಸ್ಥಗಿತಗೊಳಿಸಲಿದ್ದಾರೆ. ಹ್ಯಾಕ್​ಗೆ ಒಳಗಾದ ಆಥವಾ ವಂಚನೆಗೆ ಒಳಗಾದ ಎರಡು ಗಂಟೆಯೊಳಗೆ ಬ್ಯಾಂಕ್ ಅಕೌಂಟ್ ಬ್ಲಾಕ್ ಮಾಡಿದರೆ ವಂಚಕರಿಗೆ ಹಣ ಎಗರಿಸಲು ಸಾಧ್ಯವಿಲ್ಲ. ಈ ಯೋಜನೆಯಿಂದ ಕಳೆದ‌ ಏಳು ತಿಂಗಳಲ್ಲಿ ಬರೋಬ್ಬರಿ 50 ಕೋಟಿ ರೂ. ಸೈಬರ್ ವಂಚಕರ ಪಾಲಾಗುತ್ತಿದ್ದುದನ್ನು ತಪ್ಪಿಸಲಾಗಿದೆ.

ಗೋಲ್ಡನ್ ಅವರ್ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸೈಬರ್ ತಜ್ಞ ಫಣೀಂದ್ರ

ರಾಜ್ಯಕ್ಕೆ‌ ಮಾದರಿಯಾಯ್ತು ಗೋಲ್ಡನ್ ಅವರ್ :

ಕಳೆದ ವರ್ಷ ನಗರದಲ್ಲಿ ಜಾರಿಯಾಗಿದ್ದ ಗೋಲ್ಡನ್ ಅವರ್ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಈ ನೂತನ ವ್ಯವಸ್ಥೆ ಜಾರಿಗೆ ತರಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್​ ಒಲವು ತೋರಿದ್ದಾರೆ‌‌. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ಈ ಯೋಜನೆ ಜಾರಿಯಾಗಲಿದೆ‌. ಈಗಾಗಲೇ ಸಾಫ್ಟ್​ವೇರ್ ಹಾಗೂ ಅಪ್ಲಿಕೇಶನ್ ಅಪ್ಡೇಟ್ ಮಾಡಲಾಗುತ್ತಿದೆ. ಈ ಕುರಿತು ಸೈಬರ್ ಕ್ರೈಂ ಪೊಲೀಸರಿಗೆ ತರಬೇತಿ ನೀಡಲಾಗಿದೆ. ಈ ತಿಂಗಳಾಂತ್ಯಕ್ಕೆ ಈ ಯೋಜನೆ ಜಾರಿಯಾಗಲಿದೆ‌‌ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕ್​ಗಳ ಹೆಸರಿನಲ್ಲಿ ಕರೆ ಮಾಡುವ ಖದೀಮರು ಕ್ರೆಡಿಟ್ ಕಾರ್ಡ್ ನವೀಕರಣ, ಸಾಲ ನೀಡುವುದು ಸೇರಿದಂತೆ ವಿವಿಧ ಐಡಿಯಾಗಳನ್ನು ಉಪಯೋಗಿಸಿ ಓಟಿಪಿ ಕಳುಹಿಸಿಕೊಂಡು ಕ್ಷಣಾರ್ಧದಲ್ಲಿ ಗ್ರಾಹಕರ ಖಾತೆಗಳಿಂದ ಹಣ ಎಗರಿಸುತ್ತಿದ್ದ ಖದೀಮರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿಯೂ ವಿವಿಧ ಮಾರ್ಗಗಳಿಂದ‌ ಜನರನ್ನು ಯಾಮಾರಿಸಿ ಹಣ‌ ದೋಚುತ್ತಿದ್ದ ಸೈಬರ್ ಖದೀಮರಿಗೆ ಬ್ಯಾಂಕ್ ಅಕೌಂಟ್ ಬ್ಲಾಕ್ ಸಿಸ್ಟಂ‌ ಯೋಜನೆ ಬ್ರೇಕ್​ ಹಾಕಲಿದೆ.

ರಾಜ್ಯದಲ್ಲಿ ಒಂದೇ ಸೈಬರ್ ಕಂಟ್ರೋಲ್ ತೆರೆಯಲು ಸಿದ್ಧತೆ:

ಬೆಂಗಳೂರಿನಂತಹ ಮಹಾನಗರದಲ್ಲಿ ಹೆಚ್ಚಾಗಿ ಗಮನ ಹರಿಸುತ್ತಿದ್ದ ಖದೀಮರು ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಭಾಗಗಳಲ್ಲಿಯೂ ಸೈಬರ್ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳ ಹೆಸರಿನಲ್ಲಿ, ತ್ವರಿತಗತಿಯಲ್ಲಿ ಉತ್ತಮವಾಗಿ ಬೆಳೆ ಬೆಳೆಯಲು ಕೆಮಿಕಲ್‌ ನೀಡುವ ಸೋಗಿನಲ್ಲಿ ಕರೆ ಮಾಡಿ ನಯವಾಗಿ ಮುಗ್ಧ ಜನರಿಂದ ಹಣ ವಸೂಲಿ ಮಾಡುತ್ತಿರುವುದು ಹೆಚ್ಚಾಗಿ ವರದಿಯಾಗುತ್ತಿದೆ‌. ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಮೂರನೇ ಹಂತದ ನಗರಗಳಲ್ಲಿಯೂ ಸೈಬರ್ ಕೈಂ ಹೆಚ್ಚಾಗುತ್ತಿದೆ‌. ಹಾಗಾಗಿ ನಿಜಕ್ಕೂ ಯೋಜನೆ ಉತ್ತಮವಾಗಿದೆ ಎಂದು ಸೈಬರ್ ತಜ್ಞ ಫಣೀಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೈಬರ್ ಖದೀಮರಿಂದ ಹಣ ಕಳೆದುಕೊಂಡಾಗ ಕೂಡಲೇ ಈ ಕ್ರಮಗಳನ್ನು ಅನುಸರಿಸಿ:

  • ನಿಮ್ಮ ಬ್ಯಾಂಕ್ ಅಕೌಂಟ್ ನಿಂದ ಖದೀಮರು ಹಣ ವರ್ಗಾವಣೆ ಮಾಡುವುದು ಕಂಡುಬಂದರೆ ಕೂಡಲೇ 112 ಗೆ ಕರೆ ಮಾಡಿ
  • ಕರೆ ಮಾಡಿ ನಿಮ್ಮ ಆಯ್ಕೆ 3 ನ್ನು ಒತ್ತಿದಾಗ ಸೈಬರ್ ಕಂಟ್ರೋಲ್ ರೂಮ್​ಗೆ ಕರೆ ಹೋಗಲಿದೆ
  • ಬ್ಯಾಂಕ್ ನಂಬರ್ ಸೇರಿದಂತೆ ಅಗತ್ಯ ಮಾಹಿತಿ ನೀಡಿ
  • ಕೂಡಲೇ ಸಂಬಂಧಿಸಿದ ಬ್ಯಾಂಕಿಗೆ ಮಾಹಿತಿ ನೀಡಿದರೆ ಯಾವ ಅಕೌಂಟ್ ನಂಬರ್​ಗೆ ಹಣ ವರ್ಗಾವಣೆ ಆಗಿದೆ ಎಂಬುದನ್ನು ಪತ್ತೆ ಹಚ್ಚುತ್ತಾರೆ. ನಂತರ ಸೈಬರ್ ಖದೀಮರ ಅಕೌಂಟ್ ನಂಬರ್ ಸೀಜ್ ಮಾಡಲಿದ್ದಾರೆ.
  • ಹಣ ಕಡಿತವಾದ ಕೆಲವೇ ಗಂಟೆಗಳಲ್ಲಿ ಕರೆ ಮಾಡಿದರೆ‌ ಕೂಡಲೇ ವಂಚಕರ ಬ್ಯಾಂಕ್ ಖಾತೆ ಸೀಜ್ ಮಾಡಲು ನೆರವಾಗಲಿದೆ‌‌.
  • ಈ ವ್ಯವಸ್ಥೆ ಸದ್ಯ ಬೆಂಗಳೂರಿನಲ್ಲಿ ಮಾತ್ರ ಜಾರಿಯಲ್ಲಿದ್ದು, ಸದ್ಯದಲ್ಲೇ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ.

ABOUT THE AUTHOR

...view details