ಕರ್ನಾಟಕ

karnataka

ETV Bharat / state

'ವಂದೇ ಮಾತರಂ' ಗೀತೆಯೊಂದಿಗೆ 16ನೇ ವಿಧಾನಸಭೆಯ ಮೊದಲ ಅಧಿವೇಶನ ಆರಂಭ

ಇಂದು 16ನೇ ವಿಧಾನಸಭೆಯ ಮೊದಲ ಅಧಿವೇಶನ ಆರಂಭವಾಗಿದ್ದು, ಚುನಾವಣೆಯಲ್ಲಿ ಗೆದ್ದ ಶಾಸಕರು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

the-first-session-of-the-16th-legislative-assembly
'ವಂದೇ ಮಾತರಂ' ಗೀತೆಯೊಂದಿಗೆ 16ನೇ ವಿಧಾನಸಭೆಯ ಮೊದಲ ಅಧಿವೇಶನ ಆರಂಭ

By

Published : May 22, 2023, 3:20 PM IST

Updated : May 22, 2023, 3:37 PM IST

ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರು ಸೇರಿದಂತೆ ಒಟ್ಟು 93 ಮಂದಿ ಶಾಸಕರು ಇಂದು ವಿಧಾನಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. 16ನೇ ವಿಧಾನಸಭೆಯ ಮೊದಲ ಅಧಿವೇಶನವು ಇಂದು ವಂದೇ ಮಾತರಂ ಗೀತೆಯೊಂದಿಗೆ ಆರಂಭವಾಯಿತು.

ವಿಧಾನಸಭೆ ಹಂಗಾಮಿ ಸ್ಪೀಕರ್ ಆರ್.ವಿ ದೇಶಪಾಂಡೆ ಅವರು, ನೂತನ ಸದಸ್ಯರು ಪ್ರಮಾಣವಚನ ಸ್ವೀಕರಿಸಲು ಅನುವು ಮಾಡಿಕೊಟ್ಟಾಗ ವಿಧಾನಸಭೆ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಮಾಣವಚನ ಸ್ವೀಕರಿಸಲು ಆಹ್ವಾನಿಸಿದರು. ವರುಣಾ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿರುವ ಸಿದ್ದರಾಮಯ್ಯ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನಂತರ ಸಭಾಧ್ಯಕ್ಷರಿಗೆ ವಂದಿಸಿ ಪ್ರತಿಪಕ್ಷದ ಸಾಲಿನಲ್ಲಿದ್ದ ಬಸವರಾಜ ಬೊಮ್ಮಾಯಿ ಮತ್ತಿತರ ಸದಸ್ಯರಿಗೆ ಹಸ್ತಲಾಘವ ಮಾಡಿ ಸ್ವಸ್ಥಾನಕ್ಕೆ ಮರಳಿದರು.

ಕನಕಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಡಿ.ಕೆ ಶಿವಕುಮಾರ್ ಅವರು ಗಂಗಾಧರಯ್ಯ ಅಜ್ಜಯ್ಯ ಹೆಸರಿನಲ್ಲಿ ಪ್ರಮಾಣ ಮಾಡಿ ಸತ್ಯನಿಷ್ಠೆಯ ಪ್ರತಿಜ್ಞೆ ಮಾಡಿದರು. ನಂತರ ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಸದಸ್ಯರನ್ನು ಅಭಿನಂದಿಸಿದರು. ಸಚಿವರಾದ ಡಾ.ಜಿ ಪರಮೇಶ್ವರ್, ಕೆ.ಹೆಚ್​​​ ಮುನಿಯಪ್ಪ, ಕೆ.ಜೆ ಜಾರ್ಜ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್​​​ ಖರ್ಗೆ ಮತ್ತು ರಾಮಲಿಂಗಾರೆಡ್ಡಿ ಅವರು ಸತ್ಯನಿಷ್ಠೆ ಹೆಸರಿನಲ್ಲಿ ವಿಧಾನಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.

ಸಚಿವರಾದ ಎಂ.ಬಿ ಪಾಟೀಲ್ ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕರಿಸಲು ಕಾರ್ಯದರ್ಶಿ ಅವರು ಆಹ್ವಾನಿಸಿದಾಗ ಸಚಿವ ಜಮೀರ್ ಅಹಮ್ಮದ್ ಖಾನ್, ಕೃಷ್ಣಬೈರೇಗೌಡ ಸದನದಲ್ಲಿ ಹಾಜರಿರಲಿಲ್ಲ. ವಿಧಾನಸಭೆ ಸದಸ್ಯರಾಗಿ ಕೆ.ಎನ್ ರಾಜಣ್ಣ, ಅಲ್ಲಮ ಪ್ರಭು ಪಾಟೀಲ್, ಕೆ.ಎಸ್ ಆನಂದ್.

ಅರವಿಂದ್ ಬೆಲ್ಲದ್, ಆರ್ ಅಶೋಕ್, ಅರಗ ಜ್ಞಾನೇಂದ್ರ, ಅಶೋಕ್ ಪಟ್ಟಣ್, ಅಶೋಕ್​ ಕುಮಾರ್ ರೈ, ಬಾಬಾಸೇಹಬ್ ಪಾಟೀಲ್, ಅವಿನಾಶ್ ಜಾದವ್, ಡಾ ಅಜಯ್ ಧರ್ಮಸಿಂಗ್, ಬಸವನಗೌಡ ತುರುವಿಹಾಳ್, ಬಸವರಾಜ ರಾಯರೆಡ್ಡಿ, ಬಸನಗೌಡ ಗದ್ದಲ್, ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಹೊಸಬರು ಹಾಗೂ ಪ್ರಮುಖರು ಪ್ರಮಾಣ ವಚನ ಸ್ವೀಕರಿಸಿದರು.

ವಿಶೇಷವಾಗಿ ಯತ್ನಾಳ್ ಅವರು ಹಿಂದುತ್ವ ಹಾಗೂ ಗೋಮಾತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬೆಳಗಾವಿ ಉತ್ತರ ಕ್ಷೇತ್ರದಿಂದ ಚುನಾಯಿತರಾದ ಆಸೀಫ್​​ ಸೇಠ್ ಇಂಗ್ಲೀಷ್‍ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಶಿವಾನಂದ ಪಾಟೀಲ್ ಬಸವಣ್ಣನವರ ಹೆಸರಿನಲ್ಲಿ, ಅಶೋಕ್ ಮನಗುಳಿ ಅವರು ಮನೆದೇವರು, ತಂದೆ-ತಾಯಿ, ಕ್ಷೇತ್ರದ ಜನರು ಹಾಗೂ ಸತ್ಯನಿಷ್ಠೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಡಿಕೆಶಿ ಹೆಸರಿನಲ್ಲಿ ಪ್ರಮಾಣ ವಚನ:ಹಸಿರು ಶಾಲು ಹಾಕಿಕೊಂಡಿದ್ದ ಚನ್ನಗಿರಿ ಕ್ಷೇತ್ರದ ನೂತನ ಶಾಸಕ ಬಸವರಾಜ ಶಿವಗಂಗಾ ಅವರು, ಭಗವಂತ ಹಾಗೂ ಡಿ.ಕೆ ಶಿವಕುಮಾರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಹೊಸದಾಗಿ ಆಯ್ಕೆಯಾದ ಭಾಗೀರಥಿ ಅವರು ಕುಲದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನು ದರ್ಶನ್ ಪುಟ್ಟಣ್ಣಯ್ಯ ಅವರು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದು, ಅವರು ಸಂವಿಧಾನದ ಹೆಸರಿನಲ್ಲಿ, ದರ್ಶನ್ ದ್ರುವನಾರಾಯಣ್ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಅಕ್ಕಪಕ್ಕದಲ್ಲೇ ಕುಳಿತ ತಂದೆ-ಮಗ:ಜೆಡಿಎಸ್​​ನಿಂದ ಆಯ್ಕೆಯಾಗಿರುವ ಜಿ.ಟಿ ದೇವೇಗೌಡ ಹಾಗೂ ಇವರ ಪುತ್ರ ಹರೀಶ್ ಗೌಡ ಅಕ್ಕ-ಪಕ್ಕದಲ್ಲೇ ಕುಳಿತುಕೊಂಡು ಸ್ನೇಹಿತರಂತೆ ಮಾತನಾಡುತ್ತಿದ್ದದ್ದು ವಿಶೇಷವಾಗಿತ್ತು. ಚಾಮುಂಡೇಶ್ವರಿ ಕ್ಷೇತ್ರದಿಂದ ಜಿ.ಡಿ ದೇವೇಗೌಡ ಹಾಗೂ ಹುಣಸೂರು ಕ್ಷೇತ್ರದಿಂದ ಹರೀಶ್ ಗೌಡ ಗೆದ್ದ ತಂದೆ, ಮಗ ಇಬ್ಬರೂ ವಿಧಾನಸಭೆ ಪ್ರವೇಶ ಮಾಡಿದ್ದಾರೆ.

ಸ್ಪೀಕರ್ ಸಲಹೆ:ಇದಕ್ಕೂ ಮುನ್ನ 16ನೇ ವಿಧಾನಸಭೆಯ ಮೊದಲ ಅಧಿವೇಶನ 'ವಂದೇ ಮಾತರಂ' ಗೀತೆ ಹಾಡುವುದರೊಂದಿಗೆ ಸಮಾವೇಶಗೊಂಡಾಗ ಹಂಗಾಮಿ ಸ್ಪೀಕರ್ ಆರ್.ವಿ ದೇಶಪಾಂಡೆ ಮಾತನಾಡಿ, ವಿಧಾನಸಭೆಗೆ ಚುನಾಯಿತರಾಗಿರುವ ನೂತನ ಸದಸ್ಯರು ಯಾವುದೇ ವ್ಯಕ್ತಿ ಹೆಸರಿನಲ್ಲಿ ಸ್ವೀಕರಿಸಬಾರದು ಎಂದು ಸಲಹೆ ಮಾಡಿದರು. ಸಂವಿಧಾನ ಅಥವಾ ದೇವರ ಹೆಸರಿನಲ್ಲಿ ಮಾತ್ರ ಪ್ರಮಾಣವಚನ ಸ್ವೀಕರಿಸಬೇಕು. ಯಾವುದೇ ವ್ಯಕ್ತಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ ಕಾನೂನು ಬದ್ದವಾಗಿರುವುದಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರಿಗೆ ಅಭಿನಂದಿಸಿದ ಸಭಾಧ್ಯಕ್ಷರು, 16ನೇ ವಿಧಾನಸಭೆಗೆ ಆಯ್ಕೆಯಾಗಿರುವ ಸದಸ್ಯರನ್ನು ಸ್ವಾಗತಿಸಿ ಅಭಿನಂದಿಸಿದರು. ರಮೇಶ್ ಜಾರಕಿಹೊಳಿ ಅವರು ಆರಂಭದಿಂದಲೇ ಕುಳಿತ್ತಿದ್ದರು. ಆದರೆ, ಪ್ರಮಾಣವಚನ ಸ್ವೀಕರಿಸಲು ಅವರ ಹೆಸರನ್ನು ಕರೆದಾಗ ಸ್ಥಾನದಲ್ಲಿ ಇರಲಿಲ್ಲ. ‌ಹೊಸದಾಗಿ ಆಯ್ಕೆಯಾದ ಶಾಸಕರೊಬ್ಬರು ಕೇಸರಿ ಪೇಟ ಧರಿಸಿ ಸದನಕ್ಕೆ ಬಂದಿದ್ದರು. ಅದೇ ರೀತಿ ಶಿವಮೊಗ್ಗ ಕ್ಷೇತ್ರದಿಂದ ಆಯ್ಕೆಯಾದ ಚನ್ನಬಸಪ್ಪ ಅವರು ಕೇಸರಿ ಶಾಲು ಹಾಕಿಕೊಂಡು ಪ್ರಮಾಣವಚನ ಸ್ವೀಕರಿಸಿದರು.

ಇದನ್ನೂ ಓದಿ:ವಿಧಾನಸೌಧ ಮೊಗಸಾಲೆಯಲ್ಲಿ ಡಿಸಿಎಂ ಡಿಕೆಶಿ- ಬಿಜೆಪಿ ಶಾಸಕರ ಫ್ರೆಂಡ್‌ಶಿಪ್; ಪರಸ್ಪರ ಕೈ ಕುಲುಕಿ ಕುಶಲೋಪರಿ

Last Updated : May 22, 2023, 3:37 PM IST

ABOUT THE AUTHOR

...view details