ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಹಾಗೂ ನಟ ಸೃಜನ್ ಲೋಕೇಶ್ ಅವರ ನಡುವೆ ಜಗಳವಾಗಿದೆ ಎನ್ನುವ ಸುಳ್ಳು ಸುದ್ದಿಯೊಂದು ಹರಿದಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಆ ತರಹದ ಯಾವುದೇ ಘಟನೆ ನಡೆದಿಲ್ಲ. ಅದೊಂದು ಸುಳ್ಳು ಸುದ್ದಿಯಾಗಿರುತ್ತದೆ. ಯಾರೋ ವಿರೋಧಿಗಳು ಈ ತರಹದ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಸಚಿವ ವಿ ಸೋಮಣ್ಣ ಅವರ ಪುತ್ರ ಅರುಣ್ ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.
ಸಚಿವ ವಿ ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಸಂಗಡಿಗರು ಹಾಗೂ ನಟ ಸೃಜನ್ ಲೋಕೇಶ್ ಸಂಗಡಿಗರ ನಡುವೆ ಗಲಾಟೆ ನಡೆದಿದೆ ಎಂದು ಕೆಲವು ಕಡೆ ವರದಿಯಾಗಿತ್ತು. ಸ್ಯಾಂಡಲ್ವುಡ್ ನಟರನ್ನೊಳಗೊಂಡ ಬ್ಯಾಡ್ಮಿಂಟನ್ ಟೂರ್ನಮೆಂಟ್ಗೆ ಸೃಜನ್ ಲೋಕೇಶ್ ತಂಡ ನಿತ್ಯ ತರಬೇತಿ ನಡೆಸುತ್ತಿತ್ತು. ಭಾನುವಾರ ತರಬೇತಿ ಮುಗಿದ ಬಳಿಕ ಏರು ಧ್ವನಿಯಲ್ಲಿ ಕಿರುಚಾಡಿದ ವಿಷಯಕ್ಕಾಗಿ ಗಲಾಟೆ ನಡೆದಿತ್ತು ಎಂದು ಕೆಲವೆಡೆ ವರದಿಯಾಗಿತ್ತು.