ಕರ್ನಾಟಕ

karnataka

ETV Bharat / state

3 ಕೋಟಿ ಮಾಣಿಕ್ಯಕ್ಕೆ 6 ವರ್ಷ ಪೂಜೆ: ಕೊನೆಗೆ ಸಿಕ್ಕಿದ್ದು ಕಲ್ಲು! - ಮುಂದೇನಾಯ್ತು ಅನ್ನೋದೇ ಇಂಟ್ರೆಸ್ಟಿಂಗ್​​​​!! - ruby cheat banglore news

ಮೂರು ಕೋಟಿ ರೂಪಾಯಿ ತೆತ್ತು ಮಾಣಿಕ್ಯ ಖರೀದಿಸಿ ಆರು ವರ್ಷ ಪೂಜಿಸಿ ಕೊನೆಯಲ್ಲಿ ಗಂಟು ತೆರೆದು ನೋಡಿದಾಗ ಕಲ್ಲು ಸಿಕ್ಕಿದ್ದು ಕಂಡು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

banglore
ಮಾಣಿಕ್ಯದಿಂದ ಮೋಸ

By

Published : Jan 25, 2020, 11:51 PM IST

ಬೆಂಗಳೂರು: ಮೂರು ಕೋಟಿ ರೂಪಾಯಿ ತೆತ್ತು ಮಾಣಿಕ್ಯ ಖರೀದಿಸಿ ಆರು ವರ್ಷ ಪೂಜಿಸಿ ಕೊನೆಯಲ್ಲಿ ಗಂಟು ತೆರೆದು ನೋಡಿದಾಗ ಕಲ್ಲು ಸಿಕ್ಕಿದ್ದು ಕಂಡು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.

ನಗರದ ಸಂಪಂಗಿರಾಮಯ್ಯ ಎಂಬುವರೇ ಮೋಸ ಹೋಗಿ ನ್ಯಾಯಕ್ಕಾಗಿ ಹೋರಾಡುತ್ತಿರುವ ವ್ಯಕ್ತಿ. ಇವರು ಕೃಷ್ಣಮೂರ್ತಿ ಎಂಬುವರ ಬಳಿ 3 ಕೋಟಿಯ 18 ಲಕ್ಷ ರೂಪಾಯಿ ನೀಡಿ ಮಾಣಿಕ್ಯ ಖರೀದಿಸಿದ್ದರು. ಈ ವೇಳೆ ಕೃಷ್ಣಮೂರ್ತಿ ಮಾಣಿಕ್ಯವನ್ನು ಬಟ್ಟೆಯಲ್ಲಿ ಸುತ್ತಿಕೊಟ್ಟು, ನಿಮಗೆ 61 ವರ್ಷವಾದಾಗ ಈ ಗಂಟು ಬಿಚ್ಚಿ ತೆರೆದು ನೋಡಿ. ಅಲ್ಲಿವರೆಗೂ ಪೂಜಾ ಕೋಣೆಯಲ್ಲಿ ಇಟ್ಟು ಪೂಜೆ ಸಲ್ಲಿಸಿ ಎಂದು ಸಂಪಂಗಿರಾಮಯ್ಯ ಅವರಿಗೆ ತಿಳಿಸಿದ್ದರಂತೆ.

ಅದರಂತೆ ಕೋಟ್ಯಧಿಪತಿ ಸಂಪಂಗಿರಾಮಯ್ಯ ಬರೋಬ್ಬರಿ 6 ವರ್ಷ ಪೂಜೆ ಸಲ್ಲಿಸಿ, 2011ರಲ್ಲಿ ಮಾಣಿಕ್ಯ ಇದ್ದ ಬಟ್ಟೆ ಗಂಟು ಬಿಚ್ಚಿ ನೋಡಿದ್ದಾರೆ. ಈ ವೇಳೆ ತಾವು ಖರೀದಿಸಿದ್ದು ಸಾಮಾನ್ಯ ಕೆಂಪು ಕಲ್ಲು, ಮೋಸ ಹೋಗಿದ್ದೇನೆ ಎಂಬುದು ಅರಿವಾದಾಗ ದೂರು ದಾಖಲಿಸಿದ್ದಾರೆ. ಅದರಂತೆ ಪೊಲೀಸರು ಎಫ್‌ಐಆರ್ ದಾಖಲಿಸಿ, ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ವೇಳೆ ಸಂಪಂಗಿರಾಮಯ್ಯ ತನಗೆ ಮೋಸವನ್ನು ಕೃಷ್ಣಮೂರ್ತಿ ಒಬ್ಬರೇ ಮಾಡಿಲ್ಲ. ಕೃಷ್ಣಮೂರ್ತಿ ಅವರ ಪತ್ನಿ ಮತ್ತು ಮಕ್ಕಳು ಎಲ್ಲರೂ ಒಟ್ಟಾಗಿ ಮೋಸ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧವೂ ತನಿಖೆ ನಡೆಸಿ, ಅವರನ್ನೂ ಆರೋಪಿಗಳನ್ನಾಗಿ ಮಾಡಬೇಕು ಎಂದು ಕೋರ್ಟ್​ಗೆ ಮನವಿ ಮಾಡಿದ್ದಾರೆ.

ಅದರಂತೆ ಕೋರ್ಟ್ ಕೃಷ್ಣಮೂರ್ತಿ ಕುಟುಂಬದವರ ವಿರುದ್ಧವೂ ತನಿಖೆ ನಡೆಸಿ ಆರೋಪಿತರ ಲಿಸ್ಟ್​ನಲ್ಲಿ ಸೇರಿಸಲು ಅನುಮತಿ ನೀಡಿದೆ. ತಮ್ಮನ್ನು ಆರೋಪಿಗಳನ್ನಾಗಿಸಲು ವಿಚಾರಣಾ ನ್ಯಾಯಾಲಯ ನೀಡಿದ ಅನುಮತಿಯನ್ನು ಪ್ರಶ್ನಿಸಿ ಕೃಷ್ಣಮೂರ್ತಿ ಪತ್ನಿ ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣದಲ್ಲಿ ಕೃಷ್ಣಮೂರ್ತಿ ಅವರನ್ನು ಆರೋಪಿತರನ್ನಾಗಿಸಿದ ಬಳಿಕ ಮತ್ತೊಮ್ಮೆ ತನಿಖೆ ನಡೆಸಿ ಕುಟುಂಬದವರನ್ನು ಆರೋಪಿತರನ್ನಾಗಿ ಮಾಡಲು ವಿಚಾರಣಾ ನ್ಯಾಯಾಲಯ ನೀಡಿರುವ ಕ್ರಮ ಸರಿಯಲ್ಲ. ಹಾಗಿದ್ದೂ ವಿಚಾರಣೆ ಹಂತದಲ್ಲಿ ಕುಟುಂಬದವರು ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಅಡ್ಡಿಯಿಲ್ಲ ಎಂದು ಆದೇಶಿಸಿದೆ.

ಇನ್ನು ಹೈಕೋರ್ಟ್ ಆದೇಶದಿಂದ ಕೃಷ್ಣಮೂರ್ತಿ ಹೊರತು ಪಡಿಸಿ ಕುಟುಂಬಸ್ಥರು ನಿರಾಳರಾಗಿದ್ದಾರೆ. ಆದರೆ ಕೃಷ್ಣಮೂರ್ತಿ ಆರೋಪಿತರಾಗಿ ಮುಂದುವರೆದಿದ್ದಾರೆ. ಇದರ ನಡುವೆ ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡಿರುವ ಸಂಪಂಗಿ ರಾಮಯ್ಯ ಕಾನೂನು ಹೋರಾಟ ಮುಂದುವರೆಸಿದ್ದಾರೆ.

ABOUT THE AUTHOR

...view details